ನವದೆಹಲಿ: ಭೂಮಿಯಿಂದ ಅತ್ಯಂತ ದೂರದಲ್ಲಿರುವ ಗ್ಯಾಲಕ್ಸಿ ಶೋಧಿಸಿರುವುದಕ್ಕಾಗಿ ಭಾರತದ ಖಗೋಳ ಶಾಸ್ತ್ರಜ್ಞರನ್ನು ನಾಸಾ ಅಭಿನಂದಿಸಿದೆ.
ಭೂಮಿಯಿಂದ ೯ಕೋಟಿ ೩೦ ಲಕ್ಷ ಜ್ಯೋತಿರ್ವರ್ಷಗಳಷ್ಟು ದೂರದಲ್ಲಿರುವ ಗ್ಯಾಲಕ್ಸಿಯನ್ನು ಭಾರತೀಯ ಖಗೋಳತಜ್ಞರು ಶೋಧಿಸಿದ್ದು, ಇಂತಹ ಸಂಶೋಧನೆಗಳು ಮಾನವ ಸಂಕುಲಕ್ಕೆ ಉಪಕಾರಿಯಾಗಲಿದೆ. ನಾವೆಲ್ಲಿದ್ದೇವೆ ಹಾಗೂ ಎತ್ತ ಸಾಗುತ್ತಿದ್ದೇವೆ ಎನ್ನುವುದನ್ನು ತಿಳಿಸುವ ಸಂಶೋಧನೆಗಳಿವು ಎಂದು ನಾಸಾದ ಸಾರ್ವಜನಿಕ ಸಂಪರ್ಕಧಿಕಾರಿ ಫೆಲಿಸಿಯಾ ಚೌ ತಿಳಿಸಿದ್ದಾರೆ.
ಭಾರತದ ಮೊದಲ ಬಹು ತರಂಗಾಂತರ ಶೋಧಕವು ಅತಿಹೆಚ್ಚು ಅತಿನೇರಳೆ ಕಿರಣಗಳನ್ನು ಹೊಸ ಮೂಲವೊಂದರಿಂದ ಗ್ರಹಿಸಿದ್ದರ ಪರಿಣಾಮವಾಗಿ ಹೊಸ ಗ್ಯಾಲಕ್ಸಿ ಶೋಧಿಸಲ್ಪಟ್ಟಿತ್ತು. ಪುಣೆ ಮೂಲದ ಡಾ.ಕನಕ್ ಸಹಾ ನೇತೃತ್ವದ ತಂಡ ಇದನ್ನು ಶೋಧಿಸಿದ್ದು, ಎಯುಡಿಎಫ್‌೦೧ ಎನ್ನುವುದಾಗಿ ಈ ಗ್ಯಾಲಕ್ಸಿಯನ್ನು ಹೆಸರಿಸಲಾಗಿತ್ತು. ನಾಸಾಕ್ಕಿಂತ ಕಡಿಮೆ ಸಾಮರ್ಥ್ಯದ ತರಂಗಾಂತರಗಳನ್ನು ಗ್ರಹಿಸಲು ಶಕ್ತವಿದ್ದ ಶೋಧಕದ ಸಹಾಯದಿಂದಾಗಿ ಈ ಸಂಶೋಧನೆ ಸಾಧ್ಯವಾಗಿದೆ ಎಂದು ತಜ್ಞರ ತಂಡ ತಿಳಿಸಿದೆ.