ಕಾಂತಾರ ಕಾಣ್ತೀರಾ?? ಹಾಗಾದರೆ ಹೀಗೂ ನೋಡಬೇಕು…

Spread the love

ಸಾಮಾನ್ಯವಾಗಿ ಜನಮಾನಸಕ್ಕೆ ಹತ್ತಿರವಾಗುವ ಯಾವುದೇ ಚಿತ್ರಗಳು ಬದುಕಿನೊಟ್ಟಿಗೆ ನೇರ ಸಂಬಂಧ ಬಳಸಿಯೇ ಬಂದವು.ಬಂಗಾರದ ಮನುಷ್ಯ ಚಿತ್ರದಿಂದ ತೊಡಗಿ, ಯಜಮಾನ, ಸೂರ್ಯವಂಶ ಎಲ್ಲವೂ ಆಯಾ ಕಾಲದ ಆದರ್ಶಗಳಾಗಿದ್ದವು. ಇದೆಲ್ಲಕ್ಕೂ ಹೊರತಾಗಿ ಕರಾವಳಿಯ ಇನ್ನೊಂದು ಆಯಾಮವನ್ನು ಕಡಲ ಕಾಣದ ಕಂಗಳಿಗೆ ಉಣಬಡಿಸಿದ್ದು ಕಾಂತಾರ ಚಿತ್ರ.

ಕಡಲ ತೀರದ ಆಚರಣೆಯೇ ಹಾಗೆ. ಹೆಕ್ಕಿದಷ್ಟೂ ಮೊಗೆದು ತುಂಬುವ ಸಂಸ್ಕೃತಿ ಕಣಜ. ಮಣ್ಣಿನ ವಾಸನೆ ಪೇರಿಸಿದ ನೀರವತೆ ಮನುಷ್ಯನ ಮಸ್ತಿಷ್ಕ ಹೊಕ್ಕು ಪಕ್ವಗೊಂಡಷ್ಟು ನವೀನತೆ. ಇದೆಲ್ಲವನ್ನೂ ಮೇಳೈಸಿ ಮೆರೆಯುತ್ತಿರುವುದು ಕಾಂತಾರ.

ಬಹಳಷ್ಟು ಜನ ಬರೆದ, ಅನೇಕರು ಕೇಳಿದ ತುಳುನಾಡಿನ ಆಚರಣೆ ದೈವಕೋಲ. ಅದನ್ನೇ ಕಂಡರಿಯದ ರೀತಿಯಲ್ಲಿ ತೆರೆದಿಟ್ಟದ್ದು ಕಾಂತಾರ. ಕೇವಲ ಪಂಜುರ್ಲಿ ಅಥವಾ ಗುಳಿಗನ ಕಥೆಯಾಗಿ ತೆರೆಯ ಮೇಲೆ ಬಂದಿದ್ದರೆ ಅದಕ್ಕಿಷ್ಟು ಮಹತ್ವ ಇತ್ತೋ ಇಲ್ಲವೋ ನಾ ಕಾಣೆ. ಆದರೆ ದೈವಗಳು ನೆಲಮೂಲದ ಸಂಸ್ಕೃತಿ ಹಾಗೂ ಜನರ ನೆಚ್ಚಿಕೊಂಡ ಬಗೆ ಕೊನೆಯ ದೃಶ್ಯದವೆರೆಗೂ ಅದ್ಭುತವಾಗಿ ಸೆರೆಯಾಗಿದೆ. ಊರಹಿರಿಕರನ್ನೆಲ್ಲ ಕರೆದು ಕೈಹಿಡಿದು ತೊನೆಯುವ ಸನ್ನಿವೇಶ, ನಿಷ್ಕಲ್ಮಶ ಹೃದಯದಲ್ಲಿ ಮಿಡಿಯುವ ಭಾವಾವೇಶವೇ ಸರಿ. ಚಿತ್ರದ ಆದಿಯಲ್ಲಿ ಬರುವ ದೈವ ಪಾತ್ರಧಾರಿ ಮಾಯವಾಗುವ ಬಗೆ, ಅಂತ್ಯದಲ್ಲಿ ಮಾಯವಾದ ಪಾತ್ರಧಾರಿಯೊಂದಿಗೆ ಮಿಳಿತವಾಗುವ ಸನ್ನಿವೇಶ ಎಲ್ಲವೂ ನಮ್ಮೊಡನೇ ಸುಪ್ತವಾಗಿರುವ ದೈವಪ್ರಜ್ಞೆಯ ಸಂಕೇತ. ಅದು ಕಾಣುವುದರ ನಡುವೆ ಮರೆಯಾಗುವ ಒಳಿತಿನ ಕತ್ತಲೂ ಹೌದು. ಅದಕ್ಕೆ ತಕ್ಕಂತೆ ಆ ಸನ್ನಿವೇಶದಲ್ಲಿ ಕಥೆ ಹೇಳುವವ ಆಡುವ ಮಾತು “ಆ ಬೆಂಕಿ ಕಾಡನ್ನು ಬೆಳಕಾಗಿಸುತ್ತಿರಲಿಲ್ಲ…ಇನ್ನೂ ಕತ್ತಲಾಗಿಸುವಂತಿತ್ತು”

ನಿಜ, ಸಹಜವಾಗಿ ನಾಟಕ ಕ್ಷೇತ್ರದಲ್ಲಿ ನುರಿತ ಅನೇಕ ಕಲಾವಿದರ ಸ್ವರಭಾರವೇ ಚಿತ್ರದ ಮೆರುಗು ಹೆಚ್ಚಿಸಿದೆ. ಜೀವನದ ಕಷ್ಟ ಕಂಡುಂಡು ಗಟ್ಟಿಯಾದ ಕಮಲಕ್ಕನ ಅವಾಚ್ಯಗಳಿಂದ ತೊಡಗಿ ಮಾತನಾಡದೇ ನೋಟದಲ್ಲೇ ಎಲ್ಲವನ್ನೂ ತಿಳಿಸುವ ಅಮ್ಮಕ್ಕನವರೆಗೆ ಎಲ್ಲರದ್ದೂ ವಿಭಿನ್ನ ಪಾತ್ರ. ನಡುವಲ್ಲಿ ಒಂದೆರಡು ದೃಶ್ಯದ ಮಟ್ಟಿಗೆ ಕಂಡುಬರುವ ಯಕ್ಷಗಾನದ ಪ್ರಸಿದ್ಧ ಚೆಂಡೆ ವಾದಕ ಕೋಟ ಶಿವಾನಂದ ಅವರು, ತುಳು ಚಿತ್ರ ಕಲಾವಿದರು, ಮಾತಾಡದೇ ಅವ್ಯಕ್ತ ಭಾವದ ಧ್ವನಿಯಾಗುತ್ತಾರೆ. ಲೀಲಾ ಇನ್ ಫ್ಲೂಯೆನ್ಸ್ ಮೇಲೆ ಕೆಲಸ ಗಿಟ್ಟಿಸಿಕೊಂಡಳು ಎನ್ನುವಾಗ ನಗುವ ಫಾರೆಸ್ಟ್ ಗಾರ್ಡ್ ಸಿಬ್ಬಂದಿ, ಅತ್ಯಾವಶ್ಯಕ ಅಂತೇನೂ ಅಲ್ಲದಿದ್ದರೂ ಚಿತ್ರದಲ್ಲಿ ತರಲೇಬೇಕಾದ ಒತ್ತಡಕ್ಕೆ ತಂದ ಯಕ್ಷಗಾನದ ತುಣುಕು, ಎಲ್ಲವೂ ನಿರ್ದೇಶಕನ ಚಿತ್ತಭಿತ್ತಿ ತೆರೆದಿಟ್ಟ ರೂಪಕ.

ಪಂಚಗವ್ಯ ಹಾಕಿದೆಯನಾ ಎಂದು ಕೇಳುವ ಧಣಿ ಹಾಗೂ ನಮ್ಮದು ಅಂದಿನಿಂದಲೂ ಇಷ್ಟೇ ಭೂಮಿ ಎನ್ನುವ ಗುತ್ತಿನ ಮನೆಯ ಸಾಹುಕಾರನೂ ಗುರುವನನ್ನು ಹೊರಗೆ ನಿಲ್ಲಿಸಿಯೇ ಪ್ರಸಾದ ಕೊಡುವವ. ಇವೆಲ್ಲ ನೋಡುವಲ್ಲಿ ದೈವಗಳ ಆರಾಧನೆಯ ಮೂಲಕ ಚಿತ್ರ ಇನ್ನೇನೋ ಹೇಳಹೊರಟಿದೆ ಎನ್ನುವುದು ವಾಸ್ತವ. ಅದರರ್ಥ ಹುಳುಕು ಹುಡುಕುವುದಲ್ಲ. ಧ್ವನಿಯನ್ನು ತೆರೆದಿಡುವುದು.

ಹಾಗೆಯೇ ಭೂಮಿ ಬಡವರಿಗೆ ನೀಡಿದರೆ ದೈವ ಧಣಿಗೆ ಒಲಿದೀತು, ನೆಮ್ಮದಿ ನೀಡೀತು ಎಂಬಲ್ಲಿಗೆ ಉಳ್ಳವರ ಪಾಲಿನ ದೈವ, ಬಡವರಾಗಬೇಕು ಎನ್ನುವ ಧ್ವನ್ಯಾರ್ಥ.

ಇವಿಷ್ಟೂ ಅಥವಾ ಇನ್ನೂ ಹೆಚ್ಚು ನಮ್ಮೊಳಗಿನ ಟಿಪಿಕಲ್ ವಿಮರ್ಶಕ ನೋಡಬೇಕಾದ ಬಗೆಗಣ್ಣು. ಇವಲ್ಲದೇ ಸಾಮಾನ್ಯ ಪ್ರೇಕ್ಷಕನಾಗಿ ‘ಉಳಿದವರು ಕಂಡಂತೆ’, ನೋಡಿಸಿಕೊಂಡು ಹೋಗುವ ಸಾಮರ್ಥ್ಯ ಚಿತ್ರಕ್ಕಿದೆ. ಪ್ರತಿಯೊಬ್ಬರ ಪಾತ್ರಪ್ರಾವೀಣ್ಯತೆ, ನವಿರಾದ ಮತ್ತು ಹಸನಾದ ಹಾಸ್ಯ, ಸಹಜತೆಗೆ ಹತ್ತಿರವಾದ ಧಣಿಯ ನಡುವಳಿಕೆ, ಏನೂ ಅಲ್ಲದ ಧಣಿಯ ಚಪ್ಪಲಿಗೂ ಬೀಳುವ ರಕ್ತಕ್ಕೆ ಅದರದ್ದೇ ಆದ ಒಂದು ಮಹತ್ವವಿದೆ. ಅದಲ್ಲದೇ, ಇಲ್ಲಿ ಯಾಕೆ ದೈವ ಕಾಣಿಸಿತು? ಇಲ್ಲಿ ಯಾಕೆ ರಕ್ತ ಚಪ್ಪಲಿ ಮೇಲೆ ಬಿತ್ತು? ಇಲ್ಲಿ ಯಾಕೆ ದೈವ ಮರೆಯಾಯಿತು? ಇಲ್ಲಿ ಯಾಕೆ ಧಣಿಯ ದುಶ್ಚಟದ ಬಗ್ಗೆ ಬಂತು ? ಯಾಕೆ ಹೀಗೆ ಯಾಕೆ ಹೀಗೆ ಎಂದು ಕೇಳುವ ಪ್ರಶ್ನಾವಳಿಗಳ ಸರಮಾಲೆ ನಮ್ಮನ್ನು ಆವರಿಸುವ ಭಯವಿದೆ. ಇದನ್ನೆಲ್ಲ ಮೀರಿ ಚಿತ್ರ ಚೆನ್ನಾಗಿದೆ, ಇಷ್ಟು ಮಾತ್ರ ಹೇಳಬಹುದು. ಯಾಕೆಂದರೆ ಅನುಭವಗಳು ಸವಿಯಲ್ಲ ಅದರ ನೆನಪೇ ಸವಿ…

-ಚಂದನ್ ಕಲಾಹಂಸ


Spread the love