ತುಮಕೂರು: ಬಿಜೆಪಿ ಮುಖಂಡ ಹಾಗೂ ವಿಧಾನ ಪರಿಷತ್ ಸದಸ್ಯ ಎಚ್. ವಿಶ್ವನಾಥ್ ವಿರುದ್ಧ ಈಗ ಸಚಿವ ಸಿ.ಟಿ. ರವಿ ಕಿಡಿಕಾರಿದ್ದಾರೆ. ಟಿಪ್ಪುವಿನ ಬಗ್ಗೆ ಅರ್ಧ ಸತ್ಯವನ್ನಷ್ಟೇ ತಿಳಿದುಕೊಂಡಿದ್ದಾರೆ. ಹೀಗಾಗಿ ಟಿಪ್ಪುವನ್ನು ಮಣ್ಣಿನ ಮಗ ಎಂದಿದ್ದಾರೆ. ಆದರೆ, ಇದು ಸರಿಯಲ್ಲ. ಅರ್ಧ ಸತ್ಯವು ಸುಳ್ಳಿಗಿಂತ ಹೆಚ್ಚು ಅಪಾಯಕಾರಿಯಾಗಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ಟಿಪ್ಪು ಎರಡು ಮುಖವನ್ನು ಹೊಂದಿದ್ದಾತ. 1781 ರಿಂದ 1793ರವರೆಗಿನ ಆಡಳಿತದಲ್ಲಿ ಅತ್ಯಂತ ಕ್ರೂರವಾಗಿ ವರ್ತಿಸಿದ್ದಾನೆ. ಆ ಅವಧಿಯಲ್ಲಿ ಆಡಳಿತ ಭಾಷೆಯಾಗಿ ಕನ್ನಡವನ್ನು ಮಾಡಿಕೊಳ್ಳುವ ಬದಲಿಗೆ. ಪರ್ಷಿಯನ್ ಭಾಷೆಯನ್ನು ಆಯ್ಕೆ ಮಾಡಿಕೊಂಡಿದ್ದ. ಮೈಸೂರನ್ನು ನಜರಾಬಾದ್, ಸಕಲೇಶಪುರವನ್ನು ಮುಜರಾಬಾದ್ ಎಂದೆಲ್ಲ ಊರುಗಳ ಹೆಸರನ್ನೇ ಬದಲಾಯಿಸಿದ್ದ. ಕೆಲವರನ್ನು ಕೊಲೆಗೈದಿದ್ದ. ಆದರೆ, 1793ರಿಂದ 1799ರವರೆಗೆ ಈತನ ವರ್ತನೆ ಸಂಪೂರ್ಣ ಬದಲಾವಣೆ ಕಂಡಿತ್ತು ಎಂದು ಸಚಿವರು ತಿಳಿಸಿದರು.
ಅಂದರೆ ಆ ವೇಳೆ ಶೃಂಗೇರಿ ಮಠಕ್ಕೆ ದಾನ ಮಾಡುವುದು, ಜನರ ಬಗ್ಗೆ ಉದಾರತೆ ತೋರುವುದನ್ನು ಮಾಡಿದ್ದಾನೆ. ಆದರೆ, ಇದು ರಾಜಕೀಯ ತಂತ್ರಗಾರಿಕೆಯೋ ಇಲ್ಲವೇ ಮನಃಪರಿವರ್ತನೆಯೋ ಎಂಬುದರ ಬಗ್ಗೆ ಅಧ್ಯಯನ ನಡೆಯಬೇಕಿದೆ. ವಿಶ್ವನಾಥ್ ಅವರು ಇತಿಹಾಸವನ್ನು ಸರಿಯಾಗಿ ತಿಳಿದುಕೊಂಡಿಲ್ಲ ಎಂದು ಸಚಿವರು ತಿಳಿಸಿದರು.
ಮಣ್ಣಿನ ಮಗ ಎಂಬ ಬಿರುದು ಕೊಡುವುದಿದ್ದರೆ ಅದು ನಾಲ್ವಡಿ ಕೃಷ್ಣರಾಜ ಒಡೆಯರ್ ಇಲ್ಲವೇ ಸರ್.ಎಂ.ವಿಶ್ವೇಶ್ವರಯ್ಯ ಅವರಿಗೆ ಕೊಡಬಹುದು ಎಂದು ಹೇಳಿದರು.