ಜೋಗಕ್ಕೆ ಹೋದರೆ ಇದನ್ನು ತಪ್ಪದೇ ನೋಡಿ

Spread the love

ವಿಶ್ವವಿಖ್ಯಾತ ಜೋಗ ಜಲಪಾತಕ್ಕೆ ಬರೋ ಜನರಿಗೆ ಅದರ ಬಳಿ ಇರೋ ಇತರೇ ಸ್ಥಳಗಳಾದ ನಿಪ್ಲಿ ಜಲಪಾತ, ಶರಾವತಿ ಪ್ರಕೃತಿ ಶಿಬಿರ, ಮುಪ್ಪಾನೆ ಪ್ರಕೃತಿ ಶಿಬಿರ, ಕಾನೂರು ಕೋಟೆ, ದಬ್ಬೆ ಜಲಪಾತ, ಭೀಮೇಶ್ವರ ಜಲಪಾತ-ದೇವಸ್ಥಾನ ಮುಂತಾದ ಸ್ಥಳಗಳ ಬಗ್ಗೆ ಗೊತ್ತಿರೋದಿಲ್ಲ.

 ನೀವು ಗಣೇಶ್ ಅಭಿನಯದ ಮುಂಗಾರು ಮಳೆ-2 ಚಿತ್ರ ನೋಡಿದೀರಾ ? ನೋಡಿದ್ರೆ  ಅದರ “ಕನಸಲೂ ನೂರು ಬಾರಿ..” ಅಂತ ಶುರುವಾಗೋ ಹಾಡನ್ನೂ ನೋಡಿರ್ತೀರ. ಅದರಲ್ಲಿ ಬರೋ ಅದ್ಭುತ ಜಲಪಾತ ಮತ್ತು ಲೊಕೇಶನ್ ಯಾವುದು ಅಂತ ಅಂದ್ಕೋತಾ ಇದ್ರಾ ? ಅದೇ ಭೀಮೇಶ್ವರ ! 

ಕಡಿದಾದ ಇಳಿಜಾರು ಹಾದಿಯಲ್ಲಿ, ಸುತ್ತಮುತ್ತ ಮರಗಳ ನಡುವೆ, ಪಕ್ಷಿಗಳ ಕಲರವ ಕೇಳುತ್ತಾ ಹೆಜ್ಜೆ ಇಡುತ್ತಿದ್ದರೆ ಪ್ರಕೃತಿಯ ಸುಂದರ ನೋಟ ಕಣ್ತುಂಬಿಸಿಕೊಂಡಷ್ಟು ಸಾಲದು ಎಂಬಂತೆ ನಿಮ್ಮನ್ನು ತನ್ನತ್ತ ಬರ ಮಾಡಿಕೊಳ್ಳುತ್ತದೆ ಭೀಮೇಶ್ವರ.

bhimeshvara

ಕಣ್ಣು ಹಾಯಿಸಿದಷ್ಟು  ಹಸಿರು ರಾಶಿ ಮಧ್ಯೆ ಬಳ್ಳಿಯಂತೆ ಬಂಡೆಗಳ ನಡುವೆ ಬಳುಕಿ ಬರುವ ಜಲಧಾರೆ ಸುತ್ತಲೂ ಹಸಿರ ಹೊದಿಕೆಯನ್ನು ಹೊತ್ತುಕೊಂಡು ನಿಂತಿರುವ ಪಶ್ಚಿಮಘಟ್ಟಗಳು, ಪ್ರಕೃತಿ ಪ್ರೀತಿಸುವವನಿಗೆ ಭೀಮೇಶ್ವರ ದೇವಸ್ಥಾನದ ಸುತ್ತಲಿನ ಗುಡ್ಡ ಬೆಟ್ಟಗಳ ಹಸಿರಿನ ವಾತಾವರಣವು ಸ್ವರ್ಗ ಲೋಕದಂತೆ ಕಾಣುತ್ತದೆ.  50 ಅಡಿ ಎತ್ತರದಿಂದ ಧೋ ಎಂದು ಹಾಲಿನ ನೊರೆಯಂತೆ ಸುರಿಯುವ ಜಲಪಾತ ನೋಡಲು ಬಹು ಮೋಹಕವಾಗಿದೆ.

ಬೃಹದಾಕಾರದ ಬಂಡೆಗಳು ನಿಮ್ಮನ್ನು ಸ್ವಾಗತಿಸುತ್ತವೆ. ಜಲಪಾತವಾಗಿ ಧುಮ್ಮಿಕ್ಕೋ ಸರಳ ಹೊಳೆ ಝುಳು ಝುಳು ಅನ್ನುತ್ತಾ ನಿಮ್ಮ ಕಾಲಬುಡದಲ್ಲೇ ಸೇತುವೆಯಡಿಗೆ ಹರಿದು ಹೋಗುತ್ತಾಳೆ. ಇಲ್ಲಿಯ ಸ್ಥಳ ಪುರಾಣದ ಪ್ರಕಾರ ದ್ವಾಪರಯುಗದಲ್ಲಿ ಪಾಂಡವರು ವನವಾಸದ ಸಮಯದಲ್ಲಿ ಇಲ್ಲಿಗೆ ಬರುತ್ತಾರಂತೆ. ಅವರಲ್ಲಿ ಭೀಮ ಕಾಶಿಯಿಂದ ತಂದ ಶಿವಲಿಂಗವನ್ನು ಇಲ್ಲಿ ಪ್ರತಿಷ್ಠಾಪಿಸಲು ಅನುಜ ಧರ್ಮರಾಯನಿಗೆ ನೀಡುತ್ತಾನಂತೆ. ಧರ್ಮರಾಯನಿಂದ ಸ್ಥಾಪಿಸಲ್ಪಟ್ಟ ಇಲ್ಲಿನ ಲಿಂಗದ ಅಭಿಷೇಕಕ್ಕೆ ಬೇಕಾದ ನೀರಿಗಾಗಿ ಅರ್ಜುನ ತನ್ನ ಬಾಣವನ್ನು ಹೂಡುತ್ತಾನಂತೆ. ಆಗ ಆತನ ಬಾಣದಿಂದ ಚಿಮ್ಮಿದ ನೀರಝರಿಯೇ ಇಲ್ಲಿನ ಸರಳ ಹೊಳೆ. ಅಂದು ಅವರು ಪ್ರತಿಷ್ಠಾಪಿಸಿದ ದೇಗುಲವೇ ಭೀಮೇಶ್ವರ ದೇವಸ್ಥಾನ ಅನ್ನುತ್ತಾರೆ. ಅಂದು ಅವರಿಂದ ಶಿವಲಿಂಗ ಪ್ರತಿಷ್ಠಾಪಿಸಲ್ಪಟ್ಟಿರಬಹುದು. ತದನಂತರ ಇಲ್ಲಿನ ಪ್ರಾಂತ್ಯವನ್ನಾಳಿದ ಪಾಳೆಗಾರರಿಂದಲೋ, ಸಮೀಪದಲ್ಲಿ ಸಿಗೋ ಕಾನೂರು ಕೋಟೆಯನ್ನಾಳಿದ ಮೆಣಸಿನ ರಾಣಿಯಿಂದಲೋ ಇದರ ಎದುರಿಗಿರುವ ದೇವಾಲಯದ ನಿರ್ಮಾಣವೋ, ಜೀರ್ಣೋದ್ದಾರವೋ ಆಗಿರಬಹುದು ಎಂದು ಸ್ಥಳೀಯರು ಅಭಿಪ್ರಾಯ ಪಡುತ್ತಾರೆ.

ಸಾಗರ ಸಮೀಪವಿರುವ ಭೀಮೇಶ್ವರ ಜಲಪಾತ ಪ್ರವಾಸಿಗರನ್ನು ಅಪಾರವಾಗಿ ಆಕರ್ಷಿಸುತ್ತದೆ. ಅದಕ್ಕೂ ಮುನ್ನ ಇದನ್ನು ತಲುಪುವ ಹಾದಿಯೇ ಅದ್ಭುತ ಅನುಭವ ನೀಡುತ್ತದೆ. ಕಡಿದಾದ ಇಳಿಜಾರು, ಮಧ್ಯೆ ಮಧ್ಯೆ ಸಿಗೋ ಏರುಗಳ ನಡುವೆ ಈ ರಸ್ತೆಯಲ್ಲಿ ಬೈಕಲ್ಲಿ ಹೋಗೋದೇ ದೊಡ್ಡ ಸಾಹಸ. ನಡೆದುಕೊಂಡು ಹೋಗೋಕೆ 2 ಕಿ.ಮೀ ಆಗೋ ಈ ರಸ್ತೆಯಲ್ಲಿ ಸುಮಾರು 35-40 ನಿಮಿಷಕ್ಕೆ ಕೆಳಗಿಳಿಯಬಹುದಾದ ಈ ರಸ್ತೆಯಲ್ಲಿ ಬೈಕ್‌ ತಗೊಂಡು ಹೋಗ್ತೀರ ಅಂದ್ರೆ ಅದಕ್ಕೆ ಸಾಕಷ್ಟು ತಾಳ್ಮೆ ಮತ್ತು ಕೌಶಲ ಬೇಕು.

ಬೈಕಿನ ಬ್ರೇಕ್ಟೆಸ್ಟು:
ಊರಂದರೆ ದೊಡ್ಡ ಊರಲ್ಲವಿದು. ದಾರಿ ಮಧ್ಯೆ ಒಂದಿಷ್ಟು ಜನ ಓಡಾಡೋರು ಮತ್ತೆ ಅತ್ತಿತ್ತ ಒಂದಿಷ್ಟು ಗದ್ದೆಗಳು ಕಾಣೋದು ಬಿಟ್ಟರೆ ರಸ್ತೆಯ ಇಕ್ಕೆಲಗಳಲ್ಲೂ ಮನೆ ಸಿಗೋ ದೊಡ್ಡ ಊರಲ್ಲ ಇದು ! ಹೆದ್ದಾರಿಯ ಬುಡದಿಂದ ಕೆಳಗಿಳಿಯೋ ಟಾರ್ ರಸ್ತೆಯನ್ನ ನೋಡಿ ಕೊನೆಯವರೆಗೂ ರಸ್ತೆ ಇದೇ ತರ ಅಂದ್ಕೊಂಡು ಹೋದ್ರೆ ನಿಮ್ಮ ಕತೆ ಅಷ್ಟೆ! ನೂರು ಮೀಟರ್ಗಳಲ್ಲೇ ಕೊನೆಯಾಗೋ ಸಿಮೆಂಟ್ ರಸ್ತೆ ಕಲ್ಲು ಮಣ್ಣಿನ ರಸ್ತೆಯಾಗಿ  ಬದಲಾಗತ್ತೆ. ಕಡಿದಾದ ಇಳಿಜಾರು , ಮಧ್ಯೆ ಮಧ್ಯೆ ಸಿಗೋ ಏರುಗಳು ಜೀಪಿಗೆ ಅಂತಲೇ ಮಾಡಿರೋ ಈ ರಸ್ತೆಯಲ್ಲಿ ಕಾರ್ ಬಿಡಿ ಬೈಕಲ್ಲಿ ಹೋಗೋದೇ ದೊಡ್ಡ ಸಾಹಸ. ನಡೆದುಕೊಂಡು ಹೋಗೋಕೆ ೨ ಕಿ.ಮೀ ಆಗೋ ಈ ರಸ್ತೆಯಲ್ಲಿ ಸುಮಾರು ೩೫-೪೦ ನಿಮಿಷಕ್ಕೆ ಕೆಳಗಿಳಿಯಬಹುದಾದ ಈ ರಸ್ತೆಯಲ್ಲಿ ಬೈಕ್ ತಗೊಂಡು ಹೋಗ್ತೀರ ಅಂದ್ರೆ ಅದಕ್ಕೆ ಸಾಕಷ್ಟು  ತಾಳ್ಮೆ ಮತ್ತು ಕೌಶಲ್ಯ ಬೇಕು. ನ್ಯೂಟ್ರಲ್ಲು ಮತ್ತು ಬ್ರೇಕುಗಳ ಸಹಾಯದಿಂದಲೇ ಕೆಳಗಿಳಿಸಬೇಕಾದ ಈ ರಸ್ತೆಯಲ್ಲಿ ಮೇಲೆ ಹತ್ತಿಸೋಕೆ ಒಂದೆಡೆ ಜಾಗ ಬಿಟ್ರೆ ಬೇರೆಲ್ಲ ಕಡೆಯೂ ಮೊದಲ ಗೇರೇ ಗತಿ ! ಆದರೆ ಇಲ್ಲಿನ ಮಹಾನ್ ಇಳಿಜಾರು ಮತ್ತು ಏರುಗಳ ಸವಾಲಿನಲ್ಲಿ ತಲೆ ಕೆಡಿಸಿಕೊಳ್ಳದೇ ಡಬಲ್ ಹತ್ತಿಸಿದ ಬೈಕಿಗನಿಗೆ ಬೇರೆ ಯಾವ ರಸ್ತೆಯಲ್ಲಾದರೂ ಓಡಿಸಬಲ್ಲೆನೆಂಬ ಧೈರ್ಯ ಬಂದರೆ ತಪ್ಪೇನೂ ಇಲ್ಲ ಅನಿಸುತ್ತೆ ! 

ಭೀಮೇಶ್ವರ ದಾರಿಯಲ್ಲಿ ಮುನ್ನಡೆ ಸಾಧಿಸಲು ಯಾವುದೇ ಚಿಹ್ನೆ ಫಲಕಗಳಿಲ್ಲ, ಇದರಿಂದಾಗಿ ಪ್ರವಾಸಿಗರಿಗೆ ಈ ಸ್ಥಳವನ್ನು ತಲುಪಲು ಕಷ್ಟವಾಗುತ್ತದೆ.  ಮಳೆಗಾಲದಲ್ಲಿ ವಾಹನಗಳು ಈ ಸ್ಥಳವನ್ನು ತಲುಪಲು ಸಾಧ್ಯವಿಲ್ಲ.
ಈ ದೇವಾಲಯ ಆರಂಭಿಕ ವಿಧಾನವು ಆಕಾಶವನ್ನು ಆವರಿಸಿರುವ ಪ್ರಾಚೀನ ಕಾಡುಗಳೊಳಗಿನ ಮಣ್ಣಿನ ರಸ್ತೆಯ ಮೂಲಕ ಸಂತೋಷಕರವಾದ ನಡಿಗೆಯೊಂದಿಗೆ ಪ್ರಾರಂಭವಾಗುತ್ತದೆ ಮತ್ತು ಭೀಕರವಾದ ಗಮ್ಯಸ್ಥಾನವು ಸುಸಜ್ಜಿತ ಕಲ್ಲಿನ ಮೆಟ್ಟಿಲುಗಳ ಮೂಲಕ ಹಾದು ಹೋಗುತ್ತದೆ. ಇದರ ಕಠಿಣ ವಿಧಾನವು ಜನಸಂದಣಿಯಿಂದ ಸುರಕ್ಷಿತವಾಗಿರಲು ಕಾರಣವಾಗುತ್ತದೆ. ಆದ್ದರಿಂದ ದೇವಾಲಯದೊಳಗಿನ ಪ್ರಶಾಂತತೆ ಮತ್ತು ಶಾಂತತೆಯನ್ನು ಯಾವುದೇ ತೊಂದರೆಯಿಲ್ಲದೆ ನಾವು ಇಲ್ಲಿ ಗ್ರಹಿಸಬಹುದು.

ಮುಗಿಸೋ ಮುನ್ನ
ಅಭಯಾರಣ್ಯದ ನಡುವೆ ಇದ್ದರೂ ಇಲ್ಲಿಗೆ ಬರೋಕೆ ಯಾವ ಅನುಮತಿಯೂ ಬೇಕಿಲ್ಲ. ಹಾಗಂತ ಇದು ಸುಮ್ಮನೇ ಅಲ್ಲ. ಇಲ್ಲಿಗೆ ಬರೋದರ ಜೊತೆಗೆ ನಮಗೆ ಹೊಸ ಜವಾಬ್ದಾರಿಯೂ ಶುರುವಾಗುತ್ತೆ. ಇಲ್ಲಿ  ಕಾಣೋ ಪ್ರಾಣಿ ಪಕ್ಷಿಗಳಿಗೆ ತಿಂಡಿ ಹಾಕೋದೋ, ಇಲ್ಲಿನ ರಸ್ತೆಗಳಲ್ಲಿ ಕಸ ಎಸೆಯೋದೋ ಮಾಡದೇ ಇಲ್ಲಿನ ಸ್ವಚ್ಛ, ಪ್ರಶಾಂತ ಪರಿಸರವನ್ನು ಹಾಗೇ ಇಟ್ಟುಕೊಳ್ಳಬೇಕಾದ್ದು ಇಲ್ಲಿಗೆ ಬರೋ ನಮ್ಮ ನಿಮ್ಮೆಲ್ಲರ ಜವಾಬ್ದಾರಿ. ಅದನ್ನು ನಿಭಾಯಿಸುವಲ್ಲಿ ನಾವೆಲ್ಲಾ ಯಶಸ್ವಿಯಾಗುತ್ತೇವೆಂಬ ನಂಬಿಕೆಯೊಂದಿಗೆ ಸದ್ಯಕ್ಕೊಂದು ವಿರಾಮ.


Spread the love

Leave a Reply

Your email address will not be published. Required fields are marked *