ಕೋಲಾರ: ಮಾದಕ ಸೇವನೆ ಯಾರೇ ಮಾಡಿದರೂ ತಪ್ಪೇ. ಚಿತ್ರರಂಗವಿರಲೀ, ಅಥವಾ ಇನ್ನಲ್ಲೇ ಇರಲೀ ಜಾಲದಲ್ಲಿರುವ ಕಬ್ಬಿಣದ ಕೈಗಳನ್ನು ಸರ್ಕಾರ ತುಂಡರಿಸುವ ಕೆಲಸ ಮಾಡಲಿದೆ ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ್ ಹೇಳಿದ್ದಾರೆ.
ಇಲ್ಲಿನ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ಚಿತ್ರನಟಿ ರಾಗಿಣಿಯಾಗಲೀ ಯಾರೇ ಆಗಲೀ ಉಪ್ಪು ತಿಂದವರು ನೀರು ಕುಡಿಯಲೇಬೇಕು. ಯಾರೂ ಕೂಡ ಮಾದಕ ದ್ರವ್ಯಗಳಿಗೆ ವ್ಯಸನಿಗಳಾಗಬಾರದು. ನಮ್ಮ ಕಾಲಕ್ಕೂ ನಮ್ಮ ಮಕ್ಕಳ ಕಾಲಕ್ಕೂ ಜನರೇಷನ್ ಬದಲಾಗುತ್ತಿದೆ. ಚಿತ್ರರಂಗವೂ ಬದಲಾಗಿದೆ ಅಂದಮಾತ್ರಕ್ಕೆ ದುಶ್ಚಟಕ್ಕೆ ಬಲಿಯಾಗುವುದಾಗಲೀ ವ್ಯಸನಿಗಳಾಗುವುದಾಗಲೀ ಮಾಡಬಾರದು. ತಪ್ಪು ಯಾರೂ ಮಾಡಿದ್ದಾರೆ ಎನ್ನುವುದು ಜನರಿಗೆ ತನಿಖೆಯಿಂದ ಗೊತ್ತಾಗಲಿದೆ. ತನಿಖೆಗೂ ಮುನ್ನ ಸುಕಾಸುಮ್ಮನೆ ಹೇಳಿಕೆ ನೀಡುವುದು ಸರಿಯಲ್ಲ ಎಂದರು.
ರಾಜ್ಯ ಆಹಾರ ನಿಗಮದ ಅಧ್ಯಕ್ಷರಾಗಿರುವ ತಾವು ಫುಡ್ ಪಾರ್ಕ್ಗಳನ್ನು ಪರಿಶೀಲಿಸುತ್ತಿದ್ದು, ಈ ನಿಟ್ಟಿನಲ್ಲಿ ಮಾಲೂರಿನ ಆಹಾರ ಘಟಕಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಲು ಬಂದಿರುವುದಾಗಿ ಸಚಿವರು ಹೇಳಿದರು. ರಾಜ್ಯದಲ್ಲಿ ಫುಡ್ ಪಾರ್ಕ್ಗಳ ಸಂಖ್ಯೆಗಳನ್ನು ಹೆಚ್ಚಿಸಬೇಕಿದೆ. ಕೋವಿಡ್ ಬಳಿಕ ಸ್ಥಿರವಾಗಿ ಉಳಿದಿರುವ ಕ್ಷೇತ್ರವೆಂದರೆ ಅದು ಕೃಷಿ ಕ್ಷೇತ್ರ ಮಾತ್ರ. 10 ಸಾವಿರ ಕೋಟಿ ರೂ.ಗಳನ್ನು ಪ್ರಧಾನಿ ನರೇಂದ್ರ ಮೋದಿ ದೇಶದಲ್ಲಿ ಆಹಾರ ಉತ್ಪಾದನೆಗಳಿಗೆ ಮೀಸಲಿಟ್ಟಿದ್ದಾರೆ. ಕೋವಿಡ್ ಬಳಿಕ ಕೃಷಿ ಕ್ಷೇತ್ರಕ್ಕೆ ಹಾಗೂ ಆಹಾರ ಸಂಸ್ಕರಣಾ ಘಟಕಗಳಿಗೆ ಹೆಚ್ಚು ಒತ್ತು ನೀಡಲಾಗಿದ್ದು, ಜನರು ಸಹ ಇವುಗಳತ್ತ ಹೆಚ್ಚು ಒಲವು ತೋರಿದ್ದಾರೆ ಎಂದರು.















