ಪ್ರಶಾಂತ್ ಭೂಷಣ್ ಗೆ 1 ರೂಪಾಯಿ ದಂಡ ವಿಧಿಸಿದ ಸುಪ್ರೀಂ; ತಪ್ಪಿದರೆ ಜೈಲು

Spread the love

ನವದೆಹಲಿ: ಬಹಳ ಕುತೂಹಲ ಕೆರಳಿಸಿದ್ದ ನ್ಯಾಯಾಂಗ ನಿಂದನೆ ಪ್ರಕರಣದ ತೀರ್ಪು ಹೊರಬಿದ್ದಿದ್ದು, ಸುಪ್ರೀಂ ಕೋರ್ಟ್ ನ ಹಿರಿಯ ವಕೀಲ ಪ್ರಶಾಂತ್ ಭೂಷಣ್ ಅವರಿಗೆ 1 ರೂಪಾಯಿ ದಂಡ ವಿಧಿಸಿದೆ. ಈ ಮೊತ್ತವನ್ನು ಸೆಪ್ಟೆಂಬರ್ 15ರೊಳಗೆ ಕಟ್ಟದಿದ್ದರೆ ಮೂರು ತಿಂಗಳು ಜೈಲು ಶಿಕ್ಷೆ ಹಾಗೂ 3 ವರ್ಷಗಳ ಕಾಲ ವಕೀಲಿ ವೃತ್ತಿಯಿಂದ ನಿರ್ಬಂಧ ವಿಧಿಸಿ ಆದೇಶವನ್ನು ಹೊರಡಿಸಲಾಗಿದೆ.
ಸುಪ್ರೀಂ ಕೋರ್ಟ್ ಹಾಗೂ ಸುಪ್ರೀಂ ಕೋರ್ಟ್ ನ ಮುಖ್ಯ ನ್ಯಾಯಮೂರ್ತಿ ಎಸ್.ಎ.ಬೋಬ್ಡೆ ಅವರ ವಿರುದ್ಧ ಟ್ವೀಟ್ ಮೂಲಕ ಆಕ್ರೋಶ ಹೊರಹಾಕಿದ್ದ ಕಾರಣ ಕೋರ್ಟ್ ಸ್ವಯಂ ಪ್ರೇರಿತ ನ್ಯಾಯಾಂಗ ನಿಂದನೆ ಪ್ರಕರಣವನ್ನು  ದಾಖಲು ಮಾಡಿಕೊಂಡಿತ್ತು. ಇದೀಗ ಪ್ರಕರಣದ ವಿಚಾರಣೆ ನಡೆದು ಅಂತಿಮ ತೀರ್ಪು ಹೊರಬಿದ್ದಿದೆ. ಇದಕ್ಕೂ ಮೊದಲು ಕ್ಷಮೆ ಕೇಳುವ ಆಯ್ಕೆಯನ್ನೂ ಸುಪ್ರೀಂ ಕೋರ್ಟ್ ಪ್ರಶಾಂತ್ ಭೂಷಣ್ ಅವರಿಗೆ ನೀಡಿತ್ತು. ಆದರೆ, ಇದಕ್ಕೆ ತಾವು ತಮ್ಮ ಹಿಂದಿನ ಹೇಳಿಕೆಗೆ ಬದ್ಧವಿದ್ದು, ಕ್ಷಮೆ ಕೇಳಲು ತಮ್ಮ ಆತ್ಮಸಾಕ್ಷಿ ಒಪ್ಪದು ಎಂದು ಹೇಳಿಕೊಂಡಿದ್ದರು.
ಪ್ರಶಾಂತ್ ಅವರ ಟ್ವೀಟ್ ಗಳು ಸುಪ್ರೀಂಕೋರ್ಟ್ ಹಾಗೂ ಸಿಜೆಐ ಘನತೆಗೆ ಚ್ಯುತಿ ತರುವಂತಿದೆ. ಹೀಗಾಗಿ ಈ ಪ್ರಕರಣದಲ್ಲಿ ಪ್ರಶಾಂತ್ ತಪ್ಪಿತಸ್ಥರು ಎಂದು ಆಗಸ್ಟ್14ರಂದು ಸುಪ್ರೀಂಕೋರ್ಟ್ ನೀಡಿದ್ದ ತೀರ್ಪಿನಲ್ಲಿ ಉಲ್ಲೇಖಿಸಿತ್ತು. ಅಲ್ಲದೆ, ಅವರು ಮಾಡಿದ್ದ ಎರಡು ಟ್ವೀಟ್ಗಳು ಕ್ರಿಮಿನಲ್ ನ್ಯಾಯಾಂಗ ನಿಂದನೆಗೆ ಸಮ ಎಂದು ಸರ್ವೋಚ್ಛ ನಾಯಾಲಯದ ತ್ರಿಸದಸ್ಯ ಪೀಠವು ಅಭಿಪ್ರಾಯಪಟ್ಟಿದ್ದವು. 
ಈಗ ಪ್ರಶಾಂತ್ ಅವರ ನಡೆಯೇನು ಎಂಬ ಬಗ್ಗೆ ಕುತೂಹಲ ಮೂಡಿದ್ದು, ಅವರು ದಂಡ ಕಟ್ಟಲಿದ್ದಾರೆಯೇ ಇಲ್ಲವೇ ಜೈಲುವಾಸವನ್ನು ಅನುಭವಿಸಲಿದ್ದಾರೆಯೇ ಎಂಬ ಪ್ರಶ್ನೆ ಮೂಡಿದೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಪ್ರಶಾಂತ್, ದಂಡ ಕಟ್ಟಬೇಕೇ ಇಲ್ಲವೇ ಬೇರೆ ಮಾರ್ಗವನ್ನು ಅನುಸರಿಸಬೇಕೇ ಎಂಬ ಬಗ್ಗೆ ಸಾಮೂಹಿಕ ನಿರ್ಧಾರ ತೆಗೆದುಕೊಳ್ಳುತ್ತೇವೆ ಎಂದು ಹೇಳಿದ್ದಾರೆ.

Spread the love

Leave a Reply

Your email address will not be published. Required fields are marked *