ಹುಬ್ಬಳ್ಳಿ: ಈಚೆಗಷ್ಟೇ ಕೇರಳದಲ್ಲಿ ವಿಮಾನ ದುರಂತವಾಗಿ 18 ಮಂದಿ ಮೃತಪಟ್ಟು ಆಘಾತ ಉಂಟಾಗಿದ್ದರ ಬೆನ್ನ ಹಿಂದೆಯೇ ರಾಜ್ಯದಲ್ಲಿಯೂ ಅಂಥದ್ದೊಂದು ಆತಂಕವನ್ನು ಹುಟ್ಟುಹಾಕಿತ್ತು. ಹುಬ್ಬಳ್ಳಿಯಲ್ಲಿ ಲ್ಯಾಂಡಿಂಗ್ ಸಮಸ್ಯೆಯಿಂದ ಕೆಲಕಾಲ ಆತಂಕ ತಂದಿತ್ತು. ಈ ವಿಮಾನದಲ್ಲಿ ಕೇಂದ್ರ ಮಾಜಿ ಸಚಿವ, ಸಂಸದ ಅನಂತಕುಮಾರ್ ಹೆಗಡೆ ಸಹ ಇದ್ದು, ಎಲ್ಲರೂ ಅಪಾಯದಿಂದ ಪಾರಾಗಿದ್ದಾರೆ.
ರಾಜ್ಯದ ಹಲವೆಡೆ ಅದರಲ್ಲೂ ಉತ್ತರ ಕರ್ನಾಟಕದ ಹಲವು ಭಾಗಳಲ್ಲಿ ಕಳೆದ 8-10 ದಿನಗಳಿಂದ ಭಾರೀ ಪ್ರಮಾಣದಲ್ಲಿ ಮಳೆಯಾಗುತ್ತಿರುವುದರ ಜೊತೆಗೆ ಹವಾಮಾನದಲ್ಲೂ ವೈಪರೀತ್ಯ ಉಂಟಾಗಿತ್ತು. ಭಾನುವಾರ ಬೆಳಗ್ಗೆ ಇಂಡಿಗೋ ವಿಮಾನ ಬೆಂಗಳೂರಿನಿಂದ ಹುಬ್ಬಳ್ಳಿಗೆ ಹೊರಟಿತ್ತು. ಆದರೆ, ಹವಾಮಾನದಲ್ಲೂ ವೈಪರೀತ್ಯ ಇರುವ ಹಿನ್ನೆಲೆಯಲ್ಲಿ ಲ್ಯಾಂಡಿಂಗ್ ಗೆ ಏರ್ ಟ್ರಾಫಿಕ್ ಕಂಟ್ರೋಲರ್ ಅವರಿಂದ ಅನುಮತಿ ಸಿಗದೆ ಕೆಲ ಕಾಲ ಆಗಸದಲ್ಲೇ ಇರುವಂತಾಯಿತು.
ಇದರಿಂದ ಪ್ರಯಾಣಿಕರಲ್ಲಿ ಸಹಜವಾಗಿ ಆತಂಕ ಮನೆಮಾಡಿತ್ತು. ಬರೋಬ್ಬರಿ ಒಂದೂವರೆ ಗಂಟೆ ಬಳಿಕ ಪೂರಕ ವಾತಾವರಣ ನಿರ್ಮಾಣವಾದ್ದರಿಂದ 10.30ರ ಸುಮಾರಿಗೆ ಸುರಕ್ಷಿತವಾಗಿ ವಿಮಾನವನ್ನು ಲ್ಯಾಂಡ್ ಮಾಡಲಾಗಿದೆ.