ನ್ಯೂಯಾರ್ಕ್ : ನಾಲ್ಕು ತಿಂಗಳ ಹಿಂದಷ್ಟೇ ಟಿಕ್‌ಟಾಕ್ನ ಸಿಇಒ ಆಗಿ ನೇಮಕಗೊಂಡಿದ್ದ ಕೆವಿನ್ ಮಯೆರ್ ತಮ್ಮ ಸ್ಥಾನಕ್ಕೆ ರಾಜಿನಾಮೆ ನೀಡಿದ್ದಾರೆ. ಹೆಚ್ಚುತ್ತಿರುವ ಒತ್ತಡ ಇದಕ್ಕೆ ಕಾರಣ ಎನ್ನಲಾಗಿದೆ.
ತಮ್ಮ ರಾಜಿನಾಮೆ ಪತ್ರದಲ್ಲಿ ಈ ಕುರಿತು ಹೇಳಿಕೊಂಡಿರುವ ಕೆವಿನ್, ದೇಶದ ರಾಜಕೀಯ ವ್ಯವಸ್ಥೆ ನಾಟಕೀಯವಾಗಿ ಬದಲಾಗುತ್ತಿದೆ. ಅದಲ್ಲದೆ, ಜಾಗತಿಕವಾಗಿ ಸಹ ಟಿಕ್‌ಟಾಕ್‌ಗೆ ಉಂಟಾಗಿರುವ ಹಿನ್ನಡೆಗೆ ಅಗತ್ಯ ಕ್ರಮ ಕೈಗೊಂಡಿದ್ದೇನೆ. ಆದರೂ ಪರಿಸ್ಥಿತಿ ನಿಯಂತ್ರಿಸುವುದು ಕಷ್ಟವಾಗಿರುವುದರಿಂದ ಭಾರವಾದ ಮನಸ್ಸಿನಿಂದ ಕಂಪನಿಗೆ ವಿದಾಯ ಹೇಳುತ್ತಿದ್ದೇನೆ ಎಂದು ಕೆವಿನ್ ಹೇಳಿದ್ದಾರೆ. ಚೀನಾ ಹಾಗೂ ಅಮೆರಿಕ ನಡುವಿನ ಬಿಕ್ಕಟ್ಟು ಮತ್ತು ಡೊನಾಲ್ಡ್ ಟ್ರಂಪ್, ಟಿಕ್‌ಟಾಕ್ ಬಗ್ಗೆ ತಳೆದಿರುವ ನಿಲುವಿನಿಂದಾಗಿ ಒತ್ತಡ ಹೆಚ್ಚುತ್ತಿರುವುದು, ಕೆವಿನ್ ರಾಜಿನಾಮೆಗೆ ಕಾರಣ ಎನ್ನಲಾಗಿದೆ.
ಈ ಮೊದಲು ಡಿಸ್ನಿ ಪ್ಲಸ್‌ನಲ್ಲಿ ಸಿಇಒ ಆಗಿ ಕೆಲಸ ಮಾಡಿದ್ದ ಕೆವಿನ್, ಮೇನಲ್ಲಿ ಟಿಕ್‌ಟಾಕ್‌ನ ಸಿಇಒ ಆಗಿ ನೇಮಕಗೊಂಡಿದ್ದರು. ಆದರೆ ಇದರ ಬೆನ್ನಲ್ಲೇ ಚೀನಾ ಗಡಿತಂಟೆ ಹಿನ್ನೆಲೆಯಲ್ಲಿ, ಟಿಕ್‌ಟಾಕ್ ಸೇರಿ ಹಲವು ಅಪ್ಲಿಕೇಶನ್‌ಗಳನ್ನ ತೆಗೆದುಹಾಕಲು ಭಾರತ ಸರ್ಕಾರ ಆದೇಶಿಸಿತ್ತು. ಇತ್ತೀಚೆಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸಹ ಟಿಕ್‌ಟಾಕ್ ಬ್ಯಾನ್ ಮಾಡಲು ಚಿಂತನೆ ನಡೆಸಿದ್ದರು. ಇದಕ್ಕಾಗಿ ಟಿಕ್‌ಟಾಕ್ ಟ್ರಂಪ್ ವಿರುದ್ಧ ಕೇಸ್ ಸಹ ದಾಖಲಿಸಿದ್ದು, ತನಿಖೆ ನಡೆಯುತ್ತಿದೆ. ಈ ನಡುವೆ ಟಿಕ್‌ಟಾಕ್ ಸಿಇಒ ರಾಜಿನಾಮೆ ನೀಡಿರುವುದು ಟಿಕ್‌ಟಾಕ್ ಸೇರಿ ಚೀನಾಕ್ಕೂ ಮುಖಭಂಗ ಉಂಟುಮಾಡಿದೆ.