ಬೆಂಗಳೂರು: ಪಿ.ವಿ ನರಸಿಂಹ ರಾವ್‌ರಂತೆಯೇ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಸಹ ದೇಶಕ್ಕಾಗಿ ದುಡಿದಿದ್ದಾರೆ. ಅವರಿಗೆ ಸಹ ಭಾರತ ರತ್ನ ಪುರಸ್ಕಾರ ಸಲ್ಲಬೇಕು ಎಂದು ಕಾಂಗ್ರೆಸ್ ಧುರೀಣ ಎಂ.ವೀರಪ್ಪ ಮೊಯ್ಲಿ ಹೇಳಿದ್ದಾರೆ.
ತೆಲಂಗಾಣ ಸರ್ಕಾರವು ಪಿ.ವಿ ನರಸಿಂಹ ರಾವ್ ಅವರಿಗೆ ಭಾರತ ರತ್ನ ಆಗ್ರಹಿಸಿದ ಬೆನ್ನಲ್ಲೇ ಈ ಮಾತಾಡಿರುವ ಮೊಯ್ಲಿ, ರಾವ್ ಅವರು ಎಷ್ಟು ಸಮರ್ಥರೋ ಅಷ್ಟೇ ಸಮರ್ಥರಾಗಿ ಮನಮೋಹನ್ ಸಿಂಗ್ ಕಾರ್ಯ ನಿರ್ವಹಿಸಿದ್ದಾರೆ. ರಾವ್ ಅವರ ಜತೆಯಲ್ಲೇ ಸಿಂಗ್ ಅವರು ಸಹ ದೇಶದ ಆರ್ಥಿಕತೆಯ ಉತ್ಥಾನಕ್ಕೆ ಶ್ರಮಿಸಿದ್ದರು. ಹಾಗಾಗಿ ಭಾರತರತ್ನ ಇಬ್ಬರಿಗೂ ಸಲ್ಲಬೇಕು ಎಂದಿದ್ದಾರೆ.
ನರಸಿಂಹರಾವ್ ಅವರು ಪ್ರಧಾನಿಯಾಗಿದ್ದಾಗ ಮನಮೋಹನ್ ಸಿಂಗ್ ಅವರು ವಿತ್ತ ಸಚಿವರಾಗಿ ಕಾರ್ಯ ನಿರ್ವಹಿಸಿದ್ದರು. ಅವರ ಶ್ರಮವನ್ನೂ ಸಹ ಗೌರವಿಸಬೇಕು ಎಂದು ಮೊಯ್ಲಿ ಅಭಿಪ್ರಾಯಪಟ್ಟಿದ್ದಾರೆ.