ಮುಂಬೈ: 21 ವರ್ಷಗಳ ಬಳಿಕ ನಿರ್ದೇಶನಕ್ಕೆ ಮರಳಿದ ಮಹೇಶ್ ಭಟ್ ಅವರ ಬಹುನಿರೀಕ್ಷಿತ ಸಡಕ್ 2 ಚಿತ್ರದ ಟ್ರೈಲರ್ ಬಿಡುಗಡೆಯಾಗಿದ್ದು, ಬಿಡುಗಡೆಯಾದ ಒಂದೇ ಗಂಟೆಯಲ್ಲಿ ಲೈಕ್ ಗಳಿಗಿಂತ ಡಿಸ್ ಲೈಕ್ ಗಳೇ ಹೆಚ್ಚಾಗಿ ಹೊಸ ದಾಖಲೆ ಬರೆದಿದೆ.
ಮಹೇಶ್ ಭಟ್ ಸೇರಿದಂತೆ ದೊಡ್ಡ ದೊಡ್ಡ ಸ್ಟಾರ್ ಗಳ ಮೇಲೆ ಬೇಸರಗೊಂಡಿರುವ ನೆಟ್ಟಿಗರ್ ಬಾಲಿವುಡ್ ನ ಉದಯೋನ್ಮುಖ ನಟ ಸುಶಾಂತ್ ಸಿಂಗ್ ರಜಪೂತ್ ಸಾವಿಗೆ ಈ ರೀತಿ ಡಿಜಿಟಲ್ ವಾರ್ ಮೂಲಕ ಸೇಡು ತೀರಿಸಿಕೊಳ್ಳುತ್ತಿದ್ದಾರೆನ್ನಲಾಗಿದೆ.
ಖ್ಯಾತ ಬಾಲಿವುಡ್ ನಟ ಸಂಜಯ್ ದತ್ತ್ ಮುಖ್ಯ ತಾರಾಗಣದಲ್ಲಿದ್ದು, ಅವರು ಇದರಲ್ಲಿ ಟ್ರಾವೆಲ್ ಏಜೆಂಟ್ ಆಗಿ ಅಭಿನಯಿಸಿದ್ದಾರೆ. ಅಲ್ಲದೆ, ಮಹೇಶ್ ಭಟ್ ಪುತ್ರಿ ಆಲಿಯಾ ಭಟ್ ಹಾಗೂ ಆದಿತ್ಯ ರಾಯ್ ಕಪೂರ್ ಸಹ ನಟಿಸಿದ್ದಾರೆ.
ಯೂಟ್ಯೂಬ್ ನಲ್ಲಿ ಟ್ರೈಲರ್ ಬಿಡುಗಡೆಯಾಗುತ್ತಿದ್ದಂತೆ ಕಾರ್ಯಪ್ರವೃತ್ತರಾದ ನೆಟ್ಟಿಗರು ಡಿಸ್ ಲೈಕ್ ಅಭಿಯಾನವನ್ನೇ ಹಮ್ಮಿಕೊಂಡಿದ್ದಾರೆ. ಬಿಡುಗಡೆಯಾಗಿ ಕೇವಲ 2 ಗಂಟೆಯೊಳಗೆ 25k ಲೈಕ್ ಗಳು ಬಂದಿದ್ದರೆ 165k ಡಿಸ್ ಲೈಕ್ ಗಳು ಬಂದಿವೆ. 4 ಗಂಟೆ ಅವಧಿಯಲ್ಲಿ ಡಿಸ್ ಲೈಕ್ ಗಳು 172k ದಾಟಿತ್ತು. ಕೆಲವರು ಸ್ಟಾರ್ ಕಿಡ್ ಗಳ ಸಿನಿಮಾ ಎಂದು ಕಿಡಿಕಾರಿದರೆ, ಮತ್ತೆ ಕೆಲವರು ಸಾರ್ವಜನಿಕರ ಶಕ್ತಿ ಏನು ಎಂಬುದು ಇಲ್ಲಿ ತಿಳಿಯುತ್ತದೆ, ಎಲ್ಲರೂ ಇದಕ್ಕೆ ಡಿಲ್ ಲೈಕ್ ಮಾಡಿ ಎಂಬಿತ್ಯಾದಿ ತರಹೇವಾರು ಕಮೆಂಟ್ ಗಳು ವ್ಯಕ್ತವಾಗಿವೆ.