ಬೆಂಗಳೂರು: ವಿಜಯಪುರದಿಂದ ಬರುತ್ತಿದ್ದ ಖಾಸಗಿ ಬಸ್ವೊಂದಕ್ಕೆ ಚಿತ್ರದುರ್ಗದ ಬಳಿ ಬೆಂಕಿ ಕಾಣಿಸಿಕೊಂಡು ಐವರು ಪ್ರಯಾಣಿಕರು ಸಜೀವ ದಹನವಾಗಿದ್ದು, 30 ಮಂದಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಇವರಿಗೆ ಸಣ್ಣಪುಟ್ಟ ಸುಟ್ಟ ಗಾಯಗಳಾಗಿದ್ದು, ಸ್ಥಳೀಯ ಆಸ್ಪತ್ರೆಗೆ ದಾಖಲಾಗಿದೆ.
ಬೆಂಗಳೂರಿಗೆ ಬರುತ್ತಿದ್ದ ಬಸ್ ಇದಾಗಿದ್ದು, ಬಸ್ನಲ್ಲಿ ಒಟ್ಟು 35 ಪ್ರಯಾಣಿಕರಿದ್ದರು. ಮಗು ಸೇರಿದಂತೆ ಐವರು ಸಜೀವ ದಹನವಾಗಿದ್ದಾರೆಂದು ಹೇಳಲಾಗಿದೆ. ಬುಧವಾರ ಮುಂಜಾನೆ ಚಿತ್ರದುರ್ಗದ ಹಿರಿಯೂರು ತಾಲೂಕಿನ ಕೆ.ಆರ್. ಹಳ್ಳಿ ಗೇಟ್ ಬಳಿಯ ರಾಷ್ಟ್ರೀಯ ಹೆದ್ದಾರಿ 4ರಲ್ಲಿ ಬೆಂಕಿ ಅವಘಡ ನಡೆದಿದೆ.
ದುರಂತ ವೇಳೆ ನಿದ್ರೆಯಲ್ಲಿದ್ದ ಪ್ರಯಾಣಿಕರಿಗೆ ಬೆಂಕಿ ಹೊತ್ತಿಕೊಂಡ ವಿಷಯ ಗೊತ್ತಾಗುತ್ತಿದ್ದಂತೆ ಹೊರಬರಲು ಯತ್ನಿಸಿದ್ದಾರೆ. ಆದರೆ, ಅಷ್ಟರಲ್ಲಾಗಲೇ ಐವರ ಪ್ರಾಣ ಹೋಗಿತ್ತು ಎನ್ನಲಾಗಿದ್ದು, ಉಳಿದವರನ್ನು ಕಷ್ಟಪಟ್ಟು ರಕ್ಷಿಸಲಾಗಿದೆ ಎನ್ನಲಾಗಿದೆ. ಬೆಂಕಿ ಹೊತ್ತಿಕೊಳ್ಳಲು ನಿಖರ ಕಾರಣ ತಿಳಿದುಬಂದಿಲ್ಲ. ಹಿರಿಯೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.