ಶಿಕ್ಷಕರ ದಿನಾಚರಣೆ ಎಂದಾಕ್ಷಣ ಯಾವಾಗಲೋ ಕಲಿಸಿದ್ದ ಆಚಾರ್ಯರ ನೆನಪುಗಳೆಲ್ಲ ನಮ್ಮವರಿಗೆ ಕಾಡತೊಡಗಿದೆ. ಅವರೇನೋ ಮಾಡಿದ್ದಾರೆಂದಲ್ಲ. ಒಂದು ದಿನಕ್ಕೆ ಬಂದು ಹೋಗುತ್ತಿರುವ ಈ ಹಬ್ಬಕ್ಕೆ ತನ್ನದೊಂದು ಉಡುಗೊರೆ ಇರಲೆಂಬ ತವಕ ಅಷ್ಟೇ. ಆದರೆ ಇವ್ಯಾವುದನ್ನೂ ಬಯಸದೇ ವಿದ್ಯಾರ್ಥಿ ಜೀವನ ಎಂಬ ಸುಂದರ ಹೂದೋಟಕ್ಕೆ ಸತ್ವ ಒದಗಿಸಿ, ಅರಳಿದ ಹೂ ಸಮಾಜಕ್ಕೆ ಪರಿಮಳ ಒದಗಿಸುವಂತೆ ಮಾಡುವವ ಸದ್ಗುರು. ಸರ್ವ ಗುಣಗಳ ಗಣಿ, ದೇವತೆಯ ಪ್ರತ್ಯಕ್ಷರೂಪ, ಮನುಕುಲದ ದೇವತಾಪುರುಷ ಎಂಬೆಲ್ಲ ಉಪೇಕ್ಷೆಗಳನ್ನು ಹೊರತುಪಡಿಸಿ, ಕೇವಲ ಮಾನವರೂಪದ ದಕ್ಷಶಿಕ್ಷಕನ ಬಗ್ಗೆ ನಾ ಮಾತಾಡುತ್ತಿರುವುದು. ಗೆಲ್ಲುವ ಕೈಗಳಿಗೆ ರಟ್ಟೆಯಾಗುವ, ಸೊಲ್ಲಾಡುವವರಿಗೆ ಧ್ವನಿ ಒದಗಿಸುವ, ಹೆಕ್ಕಿ ಹೊಳಪಿಕ್ಕುವ ಬದ್ಧತೆ ಶಿಕ್ಷಕ ಮಹಾಶಯನದ್ದು. ಇದು ಬಳಸಿಕೊಂಡವರಿಗೆ ಮಾತ್ರ ವೇದ್ಯ. ಆದರೆ ಹಿಂದಿನ ಗುರುದೇವನಿಂದ ತೊಡಗಿ, ಗುರೂಜಿಯನ್ನು ಮೀರಿ, ಮಾಸ್ತರರನ್ನು ದಾಟಿ, ಸರ್‌ಗೆ ಬಂದು ನಿಂತಿರುವ ಗುರು ಶಿಷ್ಯ ಬಂಧದ ಬಗ್ಗೆ ನಾ ನಿರ್ವಚಿಸ ಹೊರಟದ್ದು.
ಸದಾ ಸಂವೇದಿಯಾಗಿದ್ದ ಮನುಕುಲ, ಬಹಳ ಹಿಂದಿನಿಂದಲೂ ಗುರುವನ್ನು ಅರಸುತ್ತಾ ಅಲೆಯುವುದು, ಅರಸಿದ ಗುರುವಿನಲ್ಲಿ ತಾ ಬಯಸಿದ್ದನ್ನು ಅರಸುವುದು ಹಾಗೂ ದೊರೆತ ಕೂಡಲೇ ಅವರ ಕಾಲಿಗೆ ಎರಗಿ ಗುರುವಚನಪಾಲಿಸುವುದು ನಡೆದುಬಂದದ್ದೇ. ದಶರಥ ರಾಮಾದಿಗಳಿಗೆ ಕುಲಗುರು ವಸಿಷ್ಠ, ಅಸುರ ಕುಲಗುರು ಶುಕ್ರಾಚಾರ್ಯ, ದೇವಗುರು ಬೃಹಸ್ಪತಿ, ಪರಶುರಾಮ, ನಾರದ, ದ್ರೋಣಾಚಾರ್ಯ ಹೀಗೆ ಎಲ್ಲರೂ ಒಂದು ಸಂದರ್ಭಕ್ಕೆ ಆಚಾರ್ಯತ್ವವನ್ನು ಪಡೆದವರೇ. ಬಂದ ಗುರು ಕಲಿಸಿದ್ದನ್ನು ಕಲಿತು ಆಗಲಿ ಮಹಾಪ್ರಸಾದ ಎನ್ನುತ್ತಿದ್ದವರು ಅಂದಿನವರು. ಅಜ್ಞಾನದ ಅಂಧಕಾರವನ್ನು ಜ್ಞಾನಾಂಜನದಿಂದ ತೊಲಗಿಸುವ ದೊಡ್ಡ ವ್ಯಕ್ತಿತ್ವಕ್ಕೆ, ಈಗಿನ ಶನಿ ರಾಹುಗಳಂತಹ ಶಿಷ್ಯೋತ್ತಮರು ಅಡ್ಡನಾಮದ ಉದ್ದ ಹೆಸರುಗಳನ್ನು ನೀಡುತ್ತಿರುವುದು ವಿಪರ್ಯಾಸ. ಎದುರಿನಿಂದ ಸಲಾಮು ಹೊಡೆದು, ಹಿಂದಿನಿಂದ ಹೋದೆಯಾ ಪಿಶಾಚಿ ಎಂದು ಕೆಕ್ಕರಿಸುವ ವಕ್ರದೃಷ್ಠಿಯ ಶಿಷ್ಯೋತ್ತಮರಿಗೆ ಗುರು ಕಲಿಸಿದ ವಿದ್ಯೆಯೂ ವೇದ್ಯವಾಗಲಿಲ್ಲ. ತಲೆಗೆ ಹತ್ತಿದ ಪಾಠ ಪರೀಕ್ಷೆವರೆಗೂ ಉಳಿಯಲಿಲ್ಲ. ಅದಲ್ಲದೆ, ಈಗ ಶಿಕ್ಷಣದ ಖಾಸಗೀಕರಣದಿಂದ ತೊಡಗಿ ಟ್ಯೂಷನ್ ಹಾವಳಿಯವರೆಗೆ ನಿಮಿಷಕ್ಕೊಬ್ಬ ಶಿಕ್ಷಕರನ್ನು ಕಾಣುವ, ವಿದ್ಯಾರ್ಥಿಗೆ ಗುರುವೆಂಬ ದೊಡ್ಡತನ ಹೇಗಾದರೂ ಅರ್ಥವಾಗಬೇಕು ಹೇಳಿ.
ಗುರುವೆಂದರೆ?
ಗರ್ವಪಡದುಪಕಾರಿ, ದರ್ಪಬಿಟ್ಟಧಿಕಾರಿ,
ನಿರವಿಕಾರದ ನಯನದಿಂ ನೋಳ್ಪುದಾರಿ.
ಸರ್ವಧರ್ಮಾಧಾರಿ, ನಿರ್ವಾಣ ಸಂಚಾರಿ
ಉರ್ವರೆಗೆ ಗುರುವವನು- ಮಂಕುತಿಮ್ಮ.
ಕಗ್ಗೋಕ್ತಿಯಂತೆಯೇ ಭಾವಿಸುವುದಾದರೆ, ಉಪಕಾರಿಯಾಗಿ, ಅಧಿಕಾರಿಯಾಗಿ, ಸರ್ವಸಮತಾಭಾವವನ್ನು ತಳೆದ ಮಹನೀಯ ಗುರು. ವಾಸ್ತವಿಕವಾಗಿ ಗುರು ಶಬ್ದದ ಅರ್ಥವ್ಯಾಪ್ತಿಯೇ ದೊಡ್ಡದು. ಈ ದೊಡ್ಡ ಪ್ರತಿಮೆಗೆ ದಡ್ಡ ಶಿಷ್ಯನ್ನು ಹದಗೊಳಿಸುವ ಗುರುತರ ಕಾರ್ಯ. ಆದರೆ ಶಿಕ್ಷಕ ಶಿಕ್ಷಣದ ಆಸ್ಥೆಯಿಂದ, ಶಿಷ್ಯನ ಪ್ರೀತಿಯಿಂದ ದೂರಾದದ್ದು ಒಂದೆಡೆಯಾದರೆ, ಹಣ ಬಾರದೇ ಹಲುಬಲಾರದೇ ಉಳಿವ ವೈಟ್ ಕಾಲರ್ ಜಾಬ್ ಒಂದೆಡೆ ಎಂಬಂತಾಗಿದೆ ಇಂದಿನ ಶಿಕ್ಷಕರ ಪರಿಸ್ಥಿತಿ.
ಶಿಕ್ಷಕರ ಪಾಡೇನು?
ಸದ್ಯ ಇರುವ ಎಲ್ಲ ಶಾಲಾ ಕಾಲೇಜುಗಳೂ ಆನ್‌ಲೈನ್‌ನಲ್ಲೇ ನಡೆಯುತ್ತಿದೆ. ಇಲ್ಲಿ ಅತಿಥಿ ಉಪನ್ಯಾಸಕರಿಗೆ ಬೆಲೆಯೇ ಇಲ್ಲ. ತರಗತಿಗಳು ನಡೆದಿದ್ದರಾದರೂ ಅವರಿಗೆ ಸರ್ಕಾರ ಯಾ ಸಂಸ್ಥೆ ನೀಡುವ ಪುಡಿಗಾಸು ಸಿಗುತ್ತಿತ್ತು. ಈಗ ಡಾಕ್ಟರೇಟ್, ಬಿ.ಎಡ್ ಎಂ.ಎ, ಎಂ.ಫಿಲ್ ಎಲ್ಲ ಮುಗಿಸಿದ ಅಭ್ಯರ್ಥಿಯಿದ್ದರೂ ಆತನ ಉದ್ಯೋಗಕ್ಕೆ ಕತ್ತರಿ ಬೀಳುವ ಸಾಧ್ಯತೆ. ಇನ್ನು ಕೆಲವರ ಕೆಲಸ ಹೋಗಿಯೂ ಆಗಿದೆ. ಆದರ್ಶವೆನ್ನುತ್ತಾ ಮನೆಯಲ್ಲಿ ಹಲ್ಲುಗಿಂಜಿ ನೌಕರಿ ಸೇರಿಕೊಂಡಿದ್ದ ಶಿಕ್ಷಕನಿಗೆ ಹಣೆಬರಹವೆಂದು ತಲೆ ಚಚ್ಚಿಕೊಳ್ಳುವ ಸದ್ಗತಿ ಬಂದಿದೆ. ಇತ್ತೀಚೆಗೆ ಒಬ್ಬರು ಟೀಚರ್ ಆನ್‌ಲೈನ್‌ನಲ್ಲಿ ಗೋಳಿಟ್ಟುಕೊಂಡದ್ದೂ ನೀವು ನೋಡಿರಬಹುದು. ಆದರೆ ಶಿಕ್ಷಣ ಇಲಾಖೆ ಮಾತ್ರ ಇವರ ಬಗ್ಗೆ ದಿವ್ಯ ಮೌನ ತಳೆದಿದೆ. ಕೋವಿಡ್ ಸಂದರ್ಭದಲ್ಲಿ ಎಲ್ಲ ವರ್ಗದವರ ಸ್ಥಿತಿಯೂ ಇದಕ್ಕಿಂತ ಭಿನ್ನವಾಗಿಲ್ಲ ಬಿಡಿ. ಆದರೆ ಇತರರು ಕೆಲಸವನ್ನಾದರೂ ಮಾಡಬಹುದು. ಈ ಶಿಕ್ಷಕರಿಗೆ ಎಲ್ಲಿ ಹೋದರೂ ಶಿಷ್ಯೋತ್ತಮರು ಪಾಪ. ಕ್ಲಾಸಿಗೆ ಬಾ(ಭಾ)ರದವರು!
ಓದಿಗಿಲ್ಲ ಕಿಮ್ಮತ್ತು…
ನೂರಾರು ಇಂಜಿನಿಯರ್, ಡಾಕ್ಟರ್‌ಗಳನ್ನು ಸೃಷ್ಠಿಸಿದ ಉಪಾಧ್ಯಾಯ, ತಾನೂ ಒಬ್ಬ ಶಿಕ್ಷಕನೆಂದು ಕರೆಸಿಕೊಳ್ಳುವಲ್ಲಿ ಪಟ್ಟ ಪಾಡೇನು ಸಾಮಾನ್ಯದ್ದಲ್ಲ. ಡಬ್ಬಲ್ ಡಿಗ್ರಿ ಪೂರೈಸುವಲ್ಲಿ ೫ ವರ್ಷ, ಬಿಎಡ್ ಸದ್ಯಕ್ಕೆ 2 ವರ್ಷ, ನೆಟ್ ಸ್ಲೆಟ್ ಆದ ಮೇಲೆ ಪಿಎಚ್‌ಡಿ ಪಟ್ಟಕ್ಕೆ 2ರಿಂಧ 3 ವರ್ಷ, ನಂತರ ಅನುಭವಕ್ಕೆ ಕಡಿಮೆಯೆಂದರೂ ಒಂದು ವರ್ಷ. ಇಷ್ಟಾಗುವ ಹೊತ್ತಿಗೆ ಆತನ ಸಹಪಾಠಿಗಳಿಗೆ ಎರಡು ಹಲ್ಲು ಹುಟ್ಟಿದ ಮಕ್ಕಳು. ಇವನಿಗೆ ಹಲ್ಲು ಬೀಳಲು ಆರಂಭ. ಆಗ ಆತನಿಗೊಂದು ಜೀವನಾರಂಭ. ಹಾಗಾದರೆ ಆದರ್ಶಕ್ಕೂ ಓದಿದ್ದಕ್ಕೂ ಕಿಮ್ಮತ್ತಿಲ್ಲ ಎಂದು ಗೊತ್ತಾಗುವಾಗ ಉಪಾಧ್ಯಾಯ, ಅಸಿಸ್ಟೆಂಟ್ ಪ್ರೊಫೆಸರ್ ಆಗಿ ನಿವೃತ್ತಿ ಹೊಂದಾಗಿರುತ್ತದೆ. ಯಾಕೆಂದರೆ ಅಸಿಸ್ಟೆಂಟ್ ಪ್ರೊಫೆಸರ್‌ಗೆ ಸಂಬಳ ಬರೋಬ್ಬರಿ 12ಸಾವಿರ. ಅಷ್ಟೇ ಓದಿ ಪ್ರಭಾವ ಬಳಸಿ ಲೆಕ್ಚರರ್ ಆದವನಿಗೆ ಕನಿಷ್ಟ 45 ಸಾವಿರ! ಹೀಗಾದರೆ ಶಿಕ್ಷಕರಾಗಲು ಯಾರಾದರೂ ಮನಸ್ಸು ಮಾಡುತ್ತಾರೆ ಹೇಳಿ.
ನಿಜವಾಗಿ ನೋಡಿದರೆ ಈಗ ಹತ್ತಿಪ್ಪತ್ತು ವರ್ಷಗಳ ಹಿಂದೆ ಇಷ್ಟೆಲ್ಲ ಓದಿದವರು ನಮಗೆ ಶಿಕ್ಷಕರಾಗಿ ಬರುತ್ತಿದ್ದರೇ? ಇಲ್ಲವೇ ಇಲ್ಲ. ಹಾಗಾದರೆ ಜಾಳಿಸಿ, ಸೋಸಿ ತೆಗೆದ ಕೆಲವು ಜನರಲ್ಲಿ ಮೆರಿಟ್ ಇದ್ದರೆ, ಪಾಠ ಮಾಡುವ ಶಕ್ತಿ ಇಲ್ಲ. ಪಾಠ ಅರ್ಥ ಮಾಡಿಸುವವರಿಗೆ ಕೆಲಸವಿಲ್ಲ. ಒಟ್ಟಿನಲ್ಲಿ ದಡ್ಡಗುರು ಪೆದ್ದ ಪ್ರತಿಮೆಗಳ ದೇಶದಲ್ಲಿ ಹಾಸಿಗೆ ಇದ್ದಷ್ಟು ಕಾಲು ಚಾಚುವವರಿಗಿಂತ ಟೇಬಲ್ ಇದ್ದಷ್ಟೂ ಕೈ ಚಾಚುವವರೇ ಹೆಚ್ಚು. ಇದರಿಂದ ವಿದ್ಯಾರ್ಥಿ ಹಾಗೂ ಶಿಕ್ಷಕರ ಬದುಕು ಮೂರಾಬಟ್ಟೆ.
ಪರಿಹಾರವೇನು?
ಪರಿಹಾರವಿಲ್ಲದ ಸಮಸ್ಯೆಯೊಂದು ಜಗತ್ತಿನಲ್ಲಿ ಇಲ್ಲ. ತಜ್ಞರ ಜತೆ ಸಂಪರ್ಕದಿಂದ ಇದಕ್ಕೊಂದು ಸೂಕ್ತ ಉಪಾಯ ಸಾಧ್ಯವಾಗದೇಕೆ? ಇದನ್ನು ಶಿಕ್ಷಣ ಮಂತ್ರಿಗಳೇ ಯೋಚಿಸಬೇಕಿದೆ. ಸರಳವಾಗಿ ಹೇಳುವುದಾದರೆ ಶಿಕ್ಷಕರಿಗಾಗಿ ಪ್ರತಿ ಶಾಲೆಯಲ್ಲೊಂದು ವೇತನ ನಿಧಿಯನ್ನೇಕೆ ಸ್ಥಾಪಿಸಬಾರದು. ಅಗತ್ಯ ಬಿದ್ದರೆ ಹಳೆ ವಿದ್ಯಾರ್ಥಿಗಳೂ ಹಣ ನೀಡುವಂತೆ. ಆದರದು ತಿಜೋರಿ ನೋಡಿಕೊಳ್ಳಲು ಕಳ್ಳನನ್ನು ಬಿಟ್ಟಂತೆ ಆಗಬಾರದಷ್ಟೇ. ಸಮಾನ ವೇತನ ನೀತಿಯನ್ನೇಕೆ ತರಕೂಡದು. ತಾತ್ಕಾಲಿಕ ಶಿಕ್ಷಕನೂ, ಪೂರ್ಣಾವಧಿ ಶಿಕ್ಷಕನೂ ಕಲಿಸುವುದು ವಿದ್ಯೆ ತಾನೇ? ಇದೆಲ್ಲ ಸಾಮಾನ್ಯ ಶಿಕ್ಷಕನ ಪರಿಪಾಟಲು ಎನ್ನುವುದಾಗಿ ನಿರ್ಲಕ್ಷ್ಯ ವಹಿಸಿದರೆ ಮುಂದೆ ಸಮಾಜಕ್ಕೆ ಸಿಗುವ ನೇತಾರರೂ ಮೂರು ಕಾಸಿನವರೇ ಆಗುತ್ತಾರೆ ಎನ್ನುವುದು ಇಲಾಖೆಗೆ ಗೊತ್ತಾದರೆ ಒಳಿತು.
ಒಟ್ಟಿನಲ್ಲಿ ಶಿಕ್ಷಕರ ದಿನಾಚರಣೆಗೆ ಆಚಾರ್ಯ ದೇವೋ ಭವ ಎಂದು ಉದ್ದುದ್ದ ಭಾಷಣ ಮಾಡುವ, ಜಾಲತಾಣಗಳಲ್ಲಿ ಪುಟಗಟ್ಟಲೇ ಪುಂಗಿಯೂದುವ ಮೊದಲು, ತಮಗೆ ಕಲಿಸಿದ ಗುರುಗಳಾದರೂ ಹೇಗಿದ್ದಾರೆಂದು ಒಂದೊಮ್ಮೆ ವಿಚಾರಿಸುವ ಬುದ್ಧಿ ಬಲಿತರೆ, ಸಮಾಜಕ್ಕೂ ಶ್ರೇಯ. ಗುರುವಿಗೂ ಗೌರವ. ಯಾಕೆಂದರೆ ಗುರು ಒಬ್ಬ ಮೂರ್ತಿಯಲ್ಲ ನೋಡಿ. ಗಣಪತಿ ಬಪ್ಪಾ ಮೋರಯಾ ಎಂದು ನದಿಗೆ ಬಿಸಾಡಿದ ಕೂಡಲೇ ಕರಗಿಹೋಗಲು. ಮತ್ತೆ ಮುಂದಿನ ವರ್ಷ ಮನೆಗೆ ಬರಲು…