ನವದೆಹಲಿ: ಕೋವಿಡ್‌ನಿಂದ ಚೇತರಿಸಿಕೊಳ್ಳುತ್ತಿದ್ದ ವ್ಯಕ್ತಿಯ ಎರಡೂ ಶ್ವಾಸಕೋಶಗಳನ್ನು ಕಸಿ ಮಾಡುವ ಮೂಲಕ ವ್ಯಕ್ತಿಯನ್ನು ಬದುಕಿಸುವಲ್ಲಿ ಹೈದರಾಬಾದ್ ಕಿಮ್ಸ್‌ನ ವೈದ್ಯರು ಯಶಸ್ವಿಯಾಗಿದ್ದಾರೆ.
32 ವರ್ಷದ ಕೋವಿಡ್ ಸೋಂಕಿತ ರಿಜ್ವಾನ್‌ಗೆ ಶ್ವಾಸಕೋಶ ಕಸಿ ಮಾಡಲಾಗಿದ್ದು, ಕೋಲ್ಕತಾದ ಮೃತ ದಾನಿಯ ಮೂಲಕ ಶ್ವಾಸಕೋಶ ಪಡೆದು ಕಸಿ ಮಾಡುವಲ್ಲಿ ಹೈದರಾಬಾದ್‌ನ ಕೃಷ್ಣಾ ಇನ್ಸ್‌ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್ (ಕಿಮ್ಸ್) ಯಶಸ್ವಿಯಾಗಿದೆ.
6 ತಿಂಗಳಿಂದ ಶ್ವಾಸಕೋಶ ಕಸಿಗಾಗಿ ಕಾಯುತ್ತಿದ್ದ ರಿಜ್ವಾನ್‌ಗೆ ಈ ಮೊದಲೇ ಶ್ವಾಸಕೋಶ ಸಂಬಂಧಿ ಕಾಯಿಲೆಯಿತ್ತು. ಶ್ವಾಸಕೋಶದೊಳಗೆ ಏಳುವ ಗುಳ್ಳೆಗಳಿಂದ ಆಗಾಗ್ಗೆ ಶ್ವಾಸಕೋಶ ಉಬ್ಬರಿಸುತ್ತಿತ್ತು ಹಾಗೂ ಅದರಿಂದಾಗಿ ಕೆಮ್ಮು, ಉಸಿರಾಟ ಸಂಬಂಧಿ ತೊಂದರೆ ಸಹ ಎದುರಾಗಿತ್ತು. ಏತನ್ಮಧ್ಯೆ ಕೊರೋನಾಗೂ ತುತ್ತಾಗಿದ್ದ ವ್ಯಕ್ತಿಗೆ ಸೂಕ್ತ ಕಾಲಕ್ಕೆ ಚಿಕಿತ್ಸೆ ದೊರಕಿದ್ದು, ರಿಜ್ವಾನ್ ಆರೋಗ್ಯವಾಗಿದ್ದಾರೆ ಎಂದು ಕಿಮ್ಸ್ ವೈದ್ಯ ಸಂದೀಪ್ ಅತ್ತಾವರ್ ತಿಳಿಸಿದ್ದಾರೆ.
ಕಷ್ಟವಾಗಿತ್ತು ಶ್ವಾಸಕೋಶ ಕಸಿ
ಕೋವಿಡ್‌ಗೂ ತುತ್ತಾಗಿ, ಶ್ವಾಸಕೋಶದ ಸಮಸ್ಯೆಯೂ ಇದ್ದುದರಿಂದ ಕಸಿ ಮಾಡುವ ವೇಳೆ ರಿಜ್ವಾನ್‌ಗೆ ಪ್ರತಿ ನಿಮಿಷಕ್ಕೆ 40 ರಿಂದ 5೦ ಲೀಟರ್‌ವರೆಗೂ ಆಮ್ಲಜನಕ ಬೇಕಾಗುತ್ತಿತ್ತು. ಹಾಗೆಯೇ ಶ್ವಾಸಕೋಶ ಹೊಂದುವ ವ್ಯಕ್ತಿಯನ್ನು ಹುಡುಕುವುದು ಅಷ್ಟೇ ಕಠಿಣವಾಗಿತ್ತು. ಅದಲ್ಲದೆ ಕೋವಿಡ್ ಸೋಂಕಿತನ ಶ್ವಾಸಕೋಶ ಮುಟ್ಟುವುದು ವೈದ್ಯ ಹಾಗೂ ರೋಗಿ ಇಬ್ಬರಿಗೂ ಅಪಾಯಕಾರಿಯಾಗಿತ್ತು. ಇದೆಲ್ಲದರ ನಡುವೆಯೇ ಶ್ವಾಸಕೋಶ ಕಸಿ ಮಾಡಲಾಯಿತು ಎಂದು ಡಾ.ಅತ್ತಾವರ್ ತಿಳಿಸಿದ್ದಾರೆ.