ಮೈಸೂರು: ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ವತಿಯಿಂದ ವಿಶೇಷ ಘಟಕ ಯೋಜನೆ ಹಾಗೂ ಗಿರಿಜನ ಉಪಯೋಜನೆ ಅಡಿಯಲ್ಲಿ ರಾಜ್ಯಮಟ್ಟದ ಯುವಜನ ಮೇಳ ಮತ್ತು ರಾಜ್ಯ ಹಾಗೂ ರಾಷ್ಟ್ರಮಟ್ಟದ ಯುವಜನೋತ್ಸವ ಕಾರ್ಯಕ್ರಮಗಳಲ್ಲಿ ವೈಯಕ್ತಿಕ ಹಾಗೂ ಗುಂಪು ಸ್ಪರ್ಧೆಯಲ್ಲಿ ಭಾಗವಹಿಸಿ ಪ್ರಶಸ್ತಿ ಪಡೆದ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ಯುವಜನರಿಗೆ ಹಾಗೂ ಸಂಘ ಸಂಸ್ಥೆಗಳಿಗೆ ಪ್ರೋತ್ಸಾಹಧನ ನೀಡಲಾಗುವುದು.
ಪ್ರಥಮ ಸ್ಥಾನಕ್ಕೆ 25 ಸಾವಿರ, ಗುಂಪು ವಿಭಾಗದ ಪ್ರತಿ ಸದಸ್ಯರಿಗೆ 5 ಸಾವಿರ ಪ್ರೋತ್ಸಾಹ ಧನ, ದ್ವಿತೀಯ ಸ್ಥಾನಕ್ಕೆ 15 ಸಾವಿರ, ಗುಂಪು ವಿಭಾಗದಲ್ಲಿ ಪ್ರತಿ ಸದಸ್ಯರಿಗೆ 3 ಸಾವಿರ ಹಾಗೂ ತೃತೀಯ ಸ್ಥಾನಕ್ಕೆ 10 ಸಾವಿರ, ಗುಂಪು ವಿಭಾಗದ ಪ್ರತಿ ಸದಸ್ಯರಿಗೆ 2 ಸಾವಿರ ಪ್ರೋತ್ಸಾಹ ಧನ ನೀಡಲಾಗುವುದು.
ಈಗಾಗಲೇ ಇಲಾಖೆಯ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿರುವ ಯುವಜನರು ಮತ್ತು ಕಲೆಯಲ್ಲಿ ಪ್ರದರ್ಶನವನ್ನು ನೀಡಿ ಕಲಾ ಪ್ರಕಾರಕ್ಕೆ ತಕ್ಕಂತೆ ವೇಷ ಭೂಷಣ, ಧಿರಿಸು, ಪಕ್ಕವಾದ್ಯ, ಹಿಮ್ಮೇಳ, ಪರಿಕರಗಳನ್ನು ಕೊಳ್ಳಲು ರಾಜ್ಯಮಟ್ಟದಲ್ಲಿ ಪ್ರದರ್ಶನ ನೀಡುವ ಸಂಘ-ಸಂಸ್ಥೆಗಳಿಗೆ ವಿವಿಧ ಪ್ರಕಾರಗಳಲ್ಲಿ ಭಾಗವಹಿಸುವ ಹಿನ್ನೆಲೆಯಲ್ಲಿ ಆರ್ಥಿಕವಾಗಿ ಪ್ರೋತ್ಸಾಹಧನ ನೀಡುವ ಸಂಬಂಧ ಯುವಕ-ಯುವತಿಯರ ಸಂಘಗಳಿಗೆ 1 ಲಕ್ಷ ರೂ. ಪ್ರೋತ್ಸಾಹಧನವನ್ನು ನೀಡಲಾಗುವುದು.
ಪ್ರೋತ್ಸಾಹಧನಕ್ಕೆ ಅರ್ಜಿ ಸಲ್ಲಿಸುವ ಸಂಘ-ಸಂಸ್ಥೆಗಳು ನಿಗಧಿತ ನಮೂನೆ ಅರ್ಜಿಯನ್ನು ಪೂರ್ಣ ವಿವರ ಹಾಗೂ ಅಗತ್ಯ ದಾಖಲೆಗಳೊಂದಿಗೆ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕರ ಕಚೇರಿಗೆ ಸೆಪ್ಟೆಂಬರ್ 25 ರೊಳಗೆ ಸಲ್ಲಿಸಬೇಕು.
ಹೆಚ್ಚಿನ ಮಾಹಿತಿಗಾಗಿ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕರ ಕಚೇರಿ, ಚಾಮುಂಡಿ ವಿಹಾರ ಕ್ರೀಡಾಂಗಣ, ನಜರ್‍ಬಾದ್, ಇಲ್ಲಿಗೆ ಖುದ್ದಾಗಿ ಅಥವಾ ದೂರವಾಣಿ ಸಂಖ್ಯೆ: 0821-2564179ರ ಮೂಲಕ ಸಂಪರ್ಕಿಸುವಂತೆ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.