ಮುಂಬೈ: ಈ ಬಾರಿಯ ಐಪಿಎಲ್ ಟೂರ್ನಿಯನ್ನು ಯುಎಇನಲ್ಲಿ ಆಯೋಜಿಸಲು ಕೇಂದ್ರ ಸರ್ಕಾರ ಮೌಖಿಕ ಅನುಮತಿಯನ್ನು ನೀಡಿದ ಬಳಿಕ ಟೂರ್ನಿ ಆಯೋಜನೆಗೆ ಸಿದ್ಧತೆಗಳು ನಡೆದಿವೆ. ಇಂದು ಈ ಬಗ್ಗೆ ಬಿಸಿಸಿಐ ಸರ್ಕಾರದಿಂದ ಅಧಿಕೃತ ಆದೇಶವನ್ನು ಕೂಡ ಪಡೆದುಕೊಂಡಿದೆ. ಈ ಮೂಲಕ ಟೂರ್ನಿ ಆಯೋಜನೆಗೆ ಸಿದ್ಧತೆ ಮತ್ತಷ್ಟು ಚುರುಕು ಪಡೆದುಕೊಂಡಿದೆ.
ಐಪಿಎಲ್ ವಿದೇಶದಲ್ಲಿ ಆಯೋಜನೆಯಾಗುತ್ತಿರುವ ಕಾರಣ ಅದಕ್ಕಾಗಿ ಕೇಂದ್ರ ಗೃಹಸಚಿವಾಲಯ ಹಾಗೂ ವಿದೇಶಾಂಗ ಇಲಾಖೆಯಿಂದ ಒಪ್ಪಿಗೆಯನ್ನು ಪಡೆಯಬೇಕಾಗಿತ್ತು. ಎರಡೂ ಇಲಾಖೆಯ ಇಲಾಕೆಯ ಒಪ್ಪಿಗೆ ಪತ್ರ ಆಯೋಜಕರಿಗೆ ಲಭ್ಯವಾಗಿರುವ ಮಾಹಿತಿಯನ್ನು ಬ್ರಿಜೇಶ್ ಪಟೇಲ್ ಪಿಟಿಐ ಜೊತೆಗೆ ಮಾತನಾಡುತ್ತಾ ತಿಳಿಸಿದ್ದಾರೆ.
ಆಗಸ್ಟ್ 20ರ ನಂತರವೇ ಹೆಚ್ಚಿನ ಎಲ್ಲಾ ಐಪಿಎಲ್ ತಂಡಗಳು ಕೂಡ ಯುಎಇಗೆ ಪ್ರಯಾಣ ಬೆಳೆಸಲಿದೆ. ಪ್ರವಾಸ ತೆರಳುವುದಕ್ಕೂ 24 ಗಂಟೆಗಳ ಅಂತರದಲ್ಲಿ ಪ್ರತಿಯೊಬ್ಬರು ಕೂಡ ಎರಡು ಕೊವೀಡ್19 ಪರೀಕ್ಷೆಯನ್ನು ನಡೆಸಿ ನೆಗೆಟಿವ್ ವರದಿಯನ್ನು ಹೊಂದಿರಬೇಕಾಗುತ್ತದೆ. ಬಳಿಕ ವಿಮಾನ ಏರಲು ಅನುಮತಿ ದೊರೆಯಲಿದೆ.