ಹಿಂದೂ ಪರಂಪರೆಯೇ ಹಾಗೆ. ಮಾನವನಲ್ಲಿಲ್ಲದ ಅಪೇಕ್ಷಣೀಯ ಅಮಾನುಷ ವ್ಯಕ್ತಿತ್ವವನ್ನು ಲೀಲಾಮಾನುಷವಾಗಿ ಚಿತ್ರಿಸಿ, ಅದಕ್ಕೆ ದೇವರ ಸ್ವರೂಪ ನೀಡುವುದಲ್ಲದೇ, ಪ್ರಾಣಪ್ರತಿಷ್ಠೆಯ ಮೂಲಕ ಕಲ್ಲನ್ನು ದೇವರನ್ನಾಗಿಸುವುದು ಯಾ ದೇವರನ್ನು ಕಲ್ಲಾಗಿಸುವುದು. ಅದು ನೋಡುಗನ ‘ಕಾಣ್ಕೆ’ಗೆ ತಕ್ಕಂತೆ ಮತ್ತು ಜಲಗಾರನಿಗೆ ದೇವರು ಕಂಡಂತೆ!!
ಚರಾಚರ ಪ್ರಪಂಚದಲ್ಲೆಲ್ಲಾ ದೇವರನ್ನು ಕಂಡ ಸಂಸ್ಕೃತಿಯಲ್ಲಿ, ಮಣ್ಣಿನ ಮೂರ್ತಿಗೆ ಗಣೇಶನ ಆಕೃತಿ ಕೊಡುವುದು ಕಷ್ಟವೆನಿಸಲಿಲ್ಲ. ಆದರೆ ಈ ರೂಪ ಗಣೇಶನಿಗೆ ಮಾತ್ರ ಒಲಿದಿರುವುದು ಇಂದಿಗೂ ಆಶ್ಚರ್ಯಕರ. ತಿಲಕರಿಂದ ಆರಂಭಗೊಂಡ ಗಣೇಶೋತ್ಸವ, ಗಲ್ಲಿಗಲ್ಲಿಯ ಶೋಕಿಯಾಗಿ ಪರಿಣಮಿಸಿದ ಈ ಕಾಲಕ್ಕೂ, ಆಸ್ತಿಕ ಸಮುದಾಯದಲ್ಲಿ ಸದುದ್ದೇಶದ ಭಗವಂತನನ್ನೇ ಸ್ಥಾಪಿಸಿರುವುದು ಸುಳ್ಳಲ್ಲ. ಹಾಗಾದರೆ ಆ ಭಗವಂತನ ಸ್ವರೂಪವನ್ನೊಮ್ಮೆ ‘ಕಾಣೋಣ’ ಬನ್ನಿ.
ಆದಿವಂದಿತನಿಗೆ ವಂದಿಸುವ ಪರಿಪಾಠ ಭಾರತೀಯರೆಲ್ಲರ ಪರಂಪರೆಯ ಭಾಗವಾಗಿಯೇ ಬಂದಿದ್ದರೂ, ಚತುರ್ಥಿಯ ಆಚರಣೆಯೊಂದು ವಿಶಿಷ್ಟ ಕೊಂಡಿಯಾಗಿ ಇದಕ್ಕೆ ತಳುಕು ಹಾಕಿಕೊಂಡಿದೆ. ಇದೊಂದು ಪಂಚಭೂತಗಳನ್ನು ನೆನೆಯುವ ಪರಮಾತ್ಮ ಪ್ರಕ್ರಿಯೆ ಎಂದರೆ ತಪ್ಪಾಗಲಾರದು.
‘ಪೃಥ್ವಿ’ಯ ಸಾರಸದೃಶ ಮಣ್ಣನ್ನು ತಂದು, ನೀರಿನಲ್ಲಿ ಹದ ಬರಿಸಿ, ‘ಗಾಳಿ’ಯಲ್ಲಿ ಕರಗಬಹುದಾದ ಮಾತುಗಳಿಗೆ ‘ಮನನಾತ್ ತ್ರಾಯತೇ ಇತಿ ಮಂತ್ರ:’ ಎನ್ನುವ ‘ಅಗ್ನಿ’ರೂಪಿಯಾದ ತೇಜೋಮಯ ಪ್ರಾಣಪ್ರತಿಷ್ಠೆ ಮಾಡಿ, ‘ಉದಕ’ದಲ್ಲಿ ನೆನೆಸುವ, ಕೊನೆಗೆ ಚೌತಿಚಂದ್ರನ ನೋಡಲೇಬಾರದ ಅನಿವಾರ್ಯತೆಗೆ ಕಟ್ಟುಬಿದ್ದು ‘ಆಕಾಶ’ದ ಚಿಂತನೆಯಲ್ಲೇ ಮನೆಗೆ ಮರಳುವ, ಪಂಚಭೂತಗಳ ಸಮ್ಮಿಲನ ಪ್ರಕ್ರಿಯೆ ಈ ಗಣೇಶ ಚತುರ್ಥಿ.
ಪಂಚಭೂತಗಳಲ್ಲಿ ದೇವರನ್ನು ಕಾಣುವ ಬಗೆಯನ್ನು ಪೂರ್ವಿಕರು ಕಾಣಿಸಿಕೊಟ್ಟ ಬಗೆಯಿದು. ಅದಲ್ಲದೇ ಮೂಷಿಕ, ಹಸ್ತಿ, ಉರಗವೆಂಬ ಪ್ರಾಣಿಸಂಕುಲಗಳೂ ಗಣಪತಿಯ ಸಹಚರರಾಗಿರುವುದು, ಮಾನವ ಮತ್ತು ಸಹಜೀವಿಗಳ ಸೌಖ್ಯ – ಸಖ್ಯದಿಂದ ಎನ್ನುವುದನ್ನು ಸಾದರಪಡಿಸಿದ ಬಗೆ.
ಶಿವ ಪಾರ್ವತಿಯ ಪ್ರಕರಣದಲ್ಲಾಗಲೀ, ಕುಬೇರನ ಆತಿಥ್ಯ ಪ್ರಕರಣದಿಂದಾಗಲೀ, ಚಂದ್ರ, ಬಾದರಾಯಣ, ರಾವಣ, ಇತ್ಯಾದಿ ಎಲ್ಲಾ ಪ್ರಕರಣದಲ್ಲೂ ಸುಮುಖನಿಗೆ ಗರ್ವಭಂಗದ ಖ್ಯಾತಿ ಸಲ್ಲಬೇಕು. ಅರ್ಥವಿಷ್ಟೇ! ದೇವರಾಗುವವನು ಆನೆಯ ಮದ, ಹೊಟ್ಟೆಯ ನಂಜು, ಮೂಷಿಕನ ಕುಟಿಲತೆ ಎಲ್ಲವನ್ನೂ ಮೆಟ್ಟಿನಿಲ್ಲುವ ಸಲುವಾಗಿ ಸಿದ್ಧಿ, ಬುದ್ಧಿಯರ ( ಗಣೇಶನ ಪತ್ನಿಯರ ಹೆಸರು) ಕೈ ಹಿಡಿಯಬೇಕು ಎನ್ನುವುದು ತಾತ್ಪರ್ಯ.
ಹಾಗಾಗಿ ಎಲಿಫೆಂಟು ಹೆಡ್ಡಿನ, ಹಾವಿನ ಬೆಲ್ಟಿನ, ಡೊಳ್ಳುಹೊಟ್ಟೆಯ, ರ್ಯಾಟ್ ರೈಡರ್ ಎನ್ನುವ, ಏಕದಂತನನ್ನು ಕಾಣುವಾಗ ಯಾರ್ಯಾರೋ ಹೇಳುವಂತೆ ಕೇವಲ ಗಣೇಶನಾಗಿ ನಮ್ಮ ದೇವರು ಕಾಣುವುದಿಲ್ಲ. ಬದಲಾಗಿ ಕೈಯೆತ್ತಿ ಮುಗಿದು,
“ಪಾಣಿಪಂಚೆ, ಮುತ್ತಿನುಂಡೆ, ಹೊನ್ನಘಂಟೆ, ಒಪ್ಪುವಾ ವಿಘ್ನೇಶ ದೇವರಿಗೆ ಇಪ್ಪತ್ತೊಂದು ನಮಸ್ಕಾರಗಳು” ಎಂದು ಕರೆಯಬೇಕೆನಿಸುತ್ತದೆ.
ಇಷ್ಟೆಲ್ಲಾ ಹೇಳುವಾಗ ಇದೊಂದು ಅಪಕಲ್ಪನೆ ಯಾ ವಿಪರೀತ ಕಲ್ಪನೆ ಎಂದೆನಿಸಿದಲ್ಲಿ, ಒಮ್ಮೆ ದೀರ್ಘವಾಗಿ ಹಬ್ಬಗಳ ತಾತ್ಪರ್ಯದ ಬಗ್ಗೆ ಯೋಚಿಸಿ. ನಮ್ಮ- ನಿಮ್ಮ ಹಸಿಮಣ್ಣಿನಂತಹ ಮನದಲ್ಲಿ ಗಣೇಶನ ಮೂರ್ತಿ ಮೂಡಲೂ ಸಾಕು. ಅದು ಮೂಡಿದಲ್ಲಿ, ಗಣಪತಿ ಬಪ್ಪೋ ಮೋರಯ, ಎಂದು ಹೊಳೆಯಲ್ಲಿ ಮುಳುಗಿಸುವ ಬದಲು, ಮತ್ತೊಂದು ಮನೆಗೂ, ಮನಕ್ಕೂ ಗೌರೀಗಣೇಶರನ್ನು ದಾಟಿಸೋಣ…ಏನಂತೀರಿ?