ವಾಷಿಂಗ್ಟನ್, ಆ. ೧೩– ವಿದೇಶಿ ವಲಸಿಗರ ಹೆಚ್-೧ಬಿ ವೀಸಾ ಮೇಲೆ ಈ ವರ್ಷಾಂತ್ಯದವರೆಗೂ ನಿರ್ಬಂಧ ಹೇರಿದ್ದ ಅಮೆರಿಕಾ ಅಧ್ಯಕ್ಷ ಟ್ರಂಪ್ ಈಗ ವೀಸಾ ನಿರ್ಬಂಧಗಳನ್ನು ಸಡಿಲಿಕೆ ಮಾಡಿದ್ದು, ಹೆಚ್-೧ಬಿ ವೀಸಾ ಹೊಂದಿರುವವರು ಅಮೆರಿಕಾ ಪ್ರವೇಶಿಸಲು ಷರತ್ತು ಬದ್ಧ ಅನುಮತಿ ನೀಡಿದೆ.
ಹೆಚ್-೧ಬಿ ವೀಸಾ ನಿಯಮಗಳನ್ನು ಸಡಿಲಿಸಿರುವ ಅಮೆರಿಕಾ ಅಧ್ಯಕ್ಷ ಟ್ರಂಪ್, ಹೆಚ್-೧ಬಿ ವೀಸಾ ಹೊಂದಿದ ಉದ್ಯೋಗಿ ವೀಸಾ ನಿಷೇಧದ ಘೋಷಣೆಗೆ ಮುಂಚಿತವಾಗಿ ತಾನು ಕೆಲಸ ಮಾಡುತ್ತಿದ್ದ ಉದ್ಯೋಗಕ್ಕೆ ಮರಳುವಂತಿದ್ದರೆ ಅಂತಹವರು ಅಮೆರಿಕಾ ಪ್ರವೇಶ ಮಾಡಬಹುದು ಎಂದು ಹೇಳಿದ್ದಾರೆ.
ಈ ಹಿಂದೆ ಇದ್ದ ಕಂಪೆನಿಯಲ್ಲೇ ಉದ್ಯೋಗ ಮಾಡುವುದಾದರೆ ಮಾತ್ರ ಅಮೆರಿಕ ಪ್ರವೇಶಕ್ಕೆ ಅವಕಾಶ ನೀಡಿದೆ. ಹೊಸ ಕಂಪೆನಿಯ ಉದ್ಯೋಗಕ್ಕೆ ಅಮೆರಿಕಾ ಪ್ರವೇಶಿಸುವುದಾದರೆ ಅದಕ್ಕೆ ಅವಕಾಶ ಇರುವುದಿಲ್ಲ.
ಈ ಹಿಂದಿನ ಕಂಪೆನಿಯ ಅದೇ ಉದ್ಯೋಗ ಆರಂಭಿಸಲು ಬಯಸುವವರು ವೀಸಾ ವರ್ಗೀಕರಣದೊಂದಿಗೆ ಅಮೆರಿಕಾಕ್ಕೆ ಪ್ರಯಾಣಿಸಬಹುದು. ಪ್ರಾಥಮಿಕ ವೀಸಾ ಹೊಂದಿರುವವರೊಂದಿಗೆ ಅವರ ಅವಲಂಬಿತರು ಅವರ ಪತ್ನಿ, ಪತಿ ಮತ್ತು ಮಕ್ಕಳು ಅಮೆರಿಕಾಕ್ಕೆ ಬರಲು ಅವಕಾಶ ನೀಡಲಾಗುವುದು ಎಂದು ಅಮೆರಿಕಾದ ರಾಷ್ಟ್ರೀಯ ಸಲಹಾ ಇಲಾಖೆ ಹೇಳಿದೆ. ಅಮೆರಿಕಾದ ಆರ್ಥಿಕ ಪುನಶ್ಚೇತನವನ್ನು ಗಮನದಲ್ಲಿಟ್ಟುಕೊಂಡು ಹೆಚ್-೧ಬಿ ವೀಸಾದ ನಿರ್ಬಂಧಗಳಲ್ಲಿ ಸಡಿಲಿಕೆ ಮಾಡಿ ಹೆಚ್-೧ಬಿ ವೀಸಾ ಹೊಂದಿರುವವರು ಉದ್ಯೋಗಿಗಳ ಪ್ರಯಾಣಕ್ಕೆ ಅಮೆರಿಕಾ ಸರ್ಕಾರ ಅನುಮತಿ ನೀಡಿದೆ.
ಕಳೆದ ಜೂನ್ ೨೨ ರಂದು ಅಮೆರಿಕಾ ಅಧ್ಯಕ್ಷ ಟ್ರಂಪ್ ಹೆಚ್-೧ಬಿ ವೀಸಾ ವಿತರಣೆ ಸ್ಟಾಂಪಿಂಗ್ ಎಲ್ಲದರ ಮೇಲೆ ಡಿಸೆಂಬರ್ ವರೆಗೂ ನಿರ್ಬಂಧ ಹೇರಿದ್ದರು. ಇದರಿಂದ ಅಮೆರಿಕಾದಲ್ಲಿ ಕೆಲಸ ಮಾಡುತ್ತಿದ್ದ ಭಾರತೀಯರು ಸೇರಿದಂತೆ ವಿದೇಶಿ ನೌಕರರು ಕಷ್ಟಕ್ಕೆ ಸಿಲುಕಿದ್ದರು. ಈಗ ವೀಸಾ ನಿಯಮಗಳಲ್ಲಿ ಸಡಿಲಿಕೆ ಮಾಡಿರುವುದು ಕೊಂಚ ನಿರಾಳತೆ ತಂದಿದೆ.