ಮೈಸೂರು:- ಸಹಕಾರ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್.ಟಿ.ಸೋಮಶೇಖರ್ ಅವರು ಶನಿವಾರ ಬೆಳಿಗ್ಗೆ ಜಿಲ್ಲಾ ಪಂಚಾಯತ್ ಆವರಣದಲ್ಲಿ ಪಶು ಚಿಕಿತ್ಸಾ ‘ಪಶು ಸಂಜೀವಿನಿ’ ವಾಹನವನ್ನು ಹಸಿರು ನಿಶಾನೆ ತೋರಿಸುವ ಮೂಲಕ ಲೋಕಾರ್ಪಣೆ ಮಾಡಿದರು.
ಬಳಿಕ ಮಾಧ್ಯಮದ ಜೊತೆ ಮಾತನಾಡಿದ ಅವರು, ಪಶು ಸಂಜೀವಿನಿ ವಾಹನದಿಂದ ಜಾನುವಾರುಗಳ ಮಾಲೀಕರಿಗೆ ಅನುಕೂಲವಾಗಲಿದೆ. ಜಾನುವಾರುಗಳಿಗೆ ತೊಂದರೆಯಾದಲ್ಲಿ 1962 ಸಹಾಯವಾಣಿಗೆ ಕರೆ ಮಾಡಿದಲ್ಲಿ ತಕ್ಷಣವೇ ವಾಹನವು ವೈದ್ಯರ ಜೊತೆಯಲ್ಲಿಯೇ ಮಾಲೀಕನ ಮನೆಗೆ ತೆರಳಿ ಜಾನುವಾರುಗಳಿಗೆ ಚಿಕಿತ್ಸೆ ನೀಡಲಾಗುವುದು ಎಂದು ಹೇಳಿದರು.
ಪಶು ಸಂಜೀವಿನಿ ವಾಹನದಲ್ಲಿ ಶಸ್ತ್ರ ಚಿಕಿತ್ಸಾ ಘಟಕ, ಪ್ರಯೋಗ ಶಾಲೆ, ಸ್ಕ್ಯಾನಿಂಗ್ ಉಪಕರಣ ಅಳವಡಿಕೆ, 250 ಲೀಟರ್ ಸಾಮರ್ಥ್ಯದ ನೀರಿನ ಟ್ಯಾಂಕ್, ಹವಾನಿಯಂತ್ರಣ ವ್ಯವಸ್ಥೆ, ಪಶು ವೈದ್ಯರು ಮತ್ತು ಸಿಬ್ಬಂದಿ ಕುಳಿತುಕೊಳ್ಳಲು ಆಸನ ಹಾಗೂ ಆಧುನಿಕ ಪಶು ವೈದ್ಯಕೀಯ ಸೇವೆಗಳನ್ನು ಹೊಂದಿದೆ ಎಂದರು.
ಪಶು ಸಂಜೀವಿನಿ ವಾಹನವನ್ನು ಮಾನ್ಯ ಮುಖ್ಯಮಂತ್ರಿಗಳು ಬೆಂಗಳೂರಿನಲ್ಲಿ ಲೋಕಾರ್ಪಣೆ ಮಾಡುವರು. ಮೈಸೂರಿನಲ್ಲಿಯೂ ಲೋಕಾರ್ಪಣೆ ಮಾಡಲಾಗಿದೆ. ಮುಂದಿನ ದಿನಗಳಲ್ಲಿ ರಾಜ್ಯಾದ್ಯಂತ ಪಶು ಸಂಜೀವಿನಿ ವಾಹನ ವ್ಯವಸ್ಥೆಯು ಜಾರಿಯಾಗಲಿದೆ ಎಂದು ಮಾಹಿತಿ ತಿಳಿಸಿದ್ದರು.
ದಸರಾ ಆಚರಣೆ ಬಗ್ಗೆ ಸೆಪ್ಟೆಂಬರ್ 8 ರಂದು ಬೆಂಗಳೂರಿನಲ್ಲಿ ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ ಉನ್ನತ ಮಟ್ಟದ ಸಮಿತಿ ಸಭೆ ನಡೆಸಲಾಗುವುದು. ನಂತರ ಮೈಸೂರಿನಲ್ಲಿ ಕಾರ್ಯಕಾರಿ ಸಮಿತಿ ಸಭೆ ನಡೆಸಿ, ಇಲ್ಲಿ ತೆಗೆದುಕೊಳ್ಳುವ ನಿರ್ಣಯದ ಮೇರೆಗೆ ದಸರಾವನ್ನು ಆಚರಿಸಲಾಗುವುದು ಎಂದು ಹೇಳಿದರು.
ಡ್ರಗ್ಸ್ ದಂಧೆಯಲ್ಲಿ ನಂಟು ಹೊಂದಿರುವ ರಾಜಕೀಯದವರಾಗಲಿ, ಸಿನಿಮಾ ನಟರಾಗಲಿ, ಉದ್ಯಮಿಗಳ ಮಕ್ಕಳಾಗಲಿ, ಇಂಥವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು. ಒಂದು ವೇಳೆ ಮೈಸೂರು ನಗರದಲ್ಲಿ ಗಾಂಜಾ ಮಾರಾಟವು ಕಂಡುಬಂದಲ್ಲಿ ಆಯಾ ವ್ಯಾಪ್ತಿಯ ಪೊಲೀಸ್ ಠಾಣೆಯ ಅಧಿಕಾರಿಗಳು ಜವಾಬ್ದಾರರಾಗಿರುತ್ತಾರೆ ಎಂದು ಹೇಳಿದರು.
ಜಿಲ್ಲಾ ಪಂಚಾಯತ್ ಅಧ್ಯಕ್ಷರಾದ ಪರಿಮಳ ಶ್ಯಾಂ, ಶಾಸಕರಾದ ಎಲ್.ನಾಗೇಂದ್ರ, ಜಿಲ್ಲಾಧಿಕಾರಿ ಬಿ. ಶರತ್, ಮಹಾನಗರ ಪಾಲಿಕೆ ಆಯುಕ್ತರಾದ ಗುರುದತ್ ಹೆಗಡೆ, ಮುಡಾ ಅಧ್ಯಕ್ಷ ಹೆಚ್.ವಿ ರಾಜೀವ್ ಹಾಗೂ ಇನ್ನಿತರರು ಉಪಸ್ಥಿತರಿದ್ದರು.