ವಿವೇಕಾನಂದರ ಭಾಷಣಕ್ಕೆ ಇಂದಿಗೆ 127 ವರ್ಷ. ಆ ಮಾತಿಗೆ ಯಾಕಿಷ್ಟು ಮಹತ್ವ?

Spread the love

ಭಾರತದ ಸುದಿನವೊಂದು ಘಟಿಸಿ ಇಂದಿಗೆ ಬರೋಬ್ಬರಿ 127 ವರ್ಷ. ಇದು ನಡೆದದ್ದು ಭಾರತದಲ್ಲಿ ಅಲ್ಲವಾದರೂ ಮುಂದಿನ ಎಲ್ಲಾ ವರ್ಷಗಳೂ ಈ ಸವಿದಿನದ ನೆನಪನ್ನು ಮರುಕಳಿಸುತ್ತಲೇ ಸಾಗಿದೆ. ಭಾರತೀಯನೊಬ್ಬ ಶತಮಾನದ ವೀರಸನ್ಯಾಸಿಯಾಗಿ ಸಮಾಜದ ಬಂಧವನ್ನೂ, ಭಾರತದ ಅಂದವನ್ನೂ ವಿದೇಶದಲ್ಲಿ ಪ್ರಖರವಾಗಿ ಪ್ರಚುರಪಡಿಸಿದ ದಿನವಿದು. ನಿಜ, ಇಂದು ಸ್ವಾಮಿ ವಿವೇಕಾನಂದರ ಚಿಕಾಗೋ ಭಾಷಣಕ್ಕೆ ಬರೋಬ್ಬರಿ 127 ವರ್ಷ.
ಒಂದು ಭಾಷಣಕ್ಕೆ ಇಷ್ಟೊಂದು ಮಹತ್ವವೇ ಎಂದು ನಮಗನ್ನಿಸದಿರದು. ಆದರೆ ಒಮ್ಮೆ ಯೋಚಿಸಿ. ಬ್ರಿಟೀಷರ ದಾಸ್ಯಕ್ಕೆ ಬಳಲಿ ಬಸವಳಿದಿದ್ದ ಅಂದಿನ ಭಾರತೀಯರಲ್ಲಿ, ವಿದೇಶೀ ಶ್ರೇಷ್ಟತೆಯ ವ್ಯಸನವನ್ನು ಅಲ್ಲಗಳೆಯಲಾಗದ ಅಂದಿನ ದಿನಗಳಲ್ಲಿ, ಜಾತಿಪದ್ಧತಿಯ ಕೀಳರಿಮೆಯಿಂದ, ಮೇಲು ಕೀಳುಗಳ ತೊಳಲಾಟದಿಂದ ತತ್ತರಿಸಿ ಹೋಗಿದ್ದ ಅಂದಿನ ದಿನಗಳಲ್ಲಿ, ಸಾಮಾನ್ಯ ಬಡ ಮಧ್ಯಮವರ್ಗದ ನರೇಂದ್ರರು ದೇಶದ ಘನತೆಯನ್ನು ವಿದೇಶೀ ನೆಲದಲ್ಲಿ ಪ್ರಚುರಪಡಿಸಿ ‘ ವಿವೇಕಾನಂದ’ರಾದದ್ದು ಅಸಾಮಾನ್ಯ ಸಂಗತಿಯಲ್ಲದೇ ಇನ್ನೇನು?
ಸ್ವಾಮಿ ವಿವೇಕಾನಂದರ ಪ್ರತಿಮೆ
ಭಾಷಣವೊಂದರ ಉಳಿಯುವಿಕೆ ಅದರ ದೀರ್ಘಕಾಲಿಕ ಚಿಂತನೆಯನ್ನು ಅವಲಂಬಿಸಿಯೇ ಸಾಗುತ್ತದೆ. ಹೀಗಿದ್ದ ಬೋಧನೆಯೇ ವಿವೇಕಾನಂದರನ್ನು ಜಗತ್ತಿನ ಉತ್ತುಂಗದಲ್ಲಿ ನಿಲ್ಲಿಸಿ, ಚಿಕಾಗೋದಲ್ಲಿ ಇಂದಿಗೂ ಅವರ ಸ್ಮರಣೆ ಮಾಡುವಂತೆ ಮಾಡುತ್ತಿರುವುದು. ಅದಕ್ಕಾಗಿಯೇ ಅವರ ಮಾತು ಶ್ರೇಷ್ಠವೆನಿಸುವುದು.
ಉತ್ತಿಷ್ಟ, ಜಾಗ್ರತ, ಪ್ರಾಪ್ಯವರಾನ್ನಿಬೋಧತ. ಬರೇ ಎದ್ದರೆ ಸಾಕಾಗಲಿಲ್ಲ. ಗುರಿ ಮುಟ್ಟುವವರೆಗೂ ನಿಲ್ಲದಿರು ಎಂಬ ಒಂದು ವಾಕ್ಯದಲ್ಲೆ ಭಾರತೀಯರ ಮನ ಗೆದ್ದಿರುವವರು ವಿವೇಕಾನಂದರು. ನಮ್ಮ ಮನವೇನು? ಸಿಸ್ಟರ್ಸ್ ಎಂಡ್ ಬ್ರದರ್ಸ್ ಆಫ್ ಅಮೇರಿಕಾ ಅಂತ ಹೇಳಿದಾಗಲೇ ನಮ್ಮವರಲ್ಲದವರನ್ನೂ ಮೆಚ್ಚುವಂತೆ ಮಾಡಿದವರು ಅವರು. ಅದಕ್ಕಾಗಿ ಪಾಶ್ಚಾತ್ಯರ ದೃಷ್ಟಿಯಲ್ಲಿ ಈ ಭಾಷಣ ಅತ್ಯಂತ ಶ್ರೇಷ್ಠ.
ಪ್ರತೀ ಬಾರಿಗೂ ದೀನದಲಿತರಿಗೆ ಮಿಡಿಯುವ ಹೃದಯವಾಗಿ, ಸಾವಿರ ಸ್ತಂಭಗಳ ದೇಗುಲಕ್ಕಿಂತ ಸಾವಿರ ಮಂದಿಯ ಹೊಟ್ಟೆ ತುಂಬುವುದಾದರೆ ಅದು ಶ್ರೇಷ್ಟ ಎಂದು ಹೇಳುವ ವಿವೇಕಾನಂದರು ಶ್ರೇಷ್ಠ ರಾಷ್ಟ್ರಚಿಂತಕರಲ್ಲವೇನು?
vivekananda
ಕನ್ಯಾಕುಮಾರಿಯ ಸೂರ್ಯೋದಯ
ಕಬ್ಬಿಣದ ಮಾಂಸಖಂಡಗಳು ಉಕ್ಕಿನ ನರಮಂಡಲಗಳು, ವಿದ್ಯುತ್ತಿನ ಇಚ್ಛಾಶಕ್ತಿಯುಳ್ಳ ಕೇವಲ ನೂರು ಜನರಿಂದ ದೇಶವನ್ನು ಕಟ್ಟುತ್ತೇನೆ ಎಂದು ಆತ್ಮವಿಶ್ವಾಸದಿಂದ ಗುಡುಗಿದ ವಿವೇಕಾನಂದರು ನಮ್ಮ ಆದರ್ಶಪುರುಷರಲ್ಲವೇನು?
ಗರ್ವಪಡದ ಉಪಕಾರಿಯಾಗಿ, ದರ್ಪ ಬಿಟ್ಟ ಅಧಿಕಾರಿಯಾಗಿ, ನಿರ್ವಿಕಾರಿಯಾಗಿ, ಉದಾರಿಯಾಗಿ, ಸರ್ವ ಧರ್ಮಾಧಾರಿಯಾಗಿ ಸಮಾನದೃಷ್ಟಿಯಿಂದ ವಿವೇಚನೆ ಮಾಡಿದವರು ವಿವೇಕಾನಂದರು ವಿಶ್ವಗುರುವಾದವರಲ್ಲವೇನು?
ಸಾರೋಟನ್ನು ಓಡಿಸುವವನಾಗುತ್ತೇನೆ ಎಂದು ಹೇಳಿದ ನರೇಂದ್ರ ಭಾರತವೆಂಬ ಬೃಹತ್ ಸಾರೋಟಿಗೇ ಚಾಲಕನಾಗಿ ನಿಂತ ಪರಿಯನ್ನು ಕಾಣುವಾಗ ಅನಿಸುತ್ತದೆ ಇವರೇ ನಮ್ಮ ನಿಜ ರಾಷ್ಟ್ರ ನಾಯಕರೆಂದು. ಹಿಡಿದ ಪಟ್ಟು ಬಿಡದ ಹಠಯೋಗಿಯಾಗಿ, ಬಡಕುಟುಂಬದಿಂದ ಬಂದೂ ಸರ್ವಧರ್ಮಸಮನ್ವಯದ ಬೃಹತ್ ತತ್ವದ ನೇತಾರರಾಗಿ, ಅಮೇರಿಕಾದ ಎಲ್ಲಾ ಪ್ರೊಫೆಸರ್ಗಳ ಜ್ಞಾನಕ್ಕೆ ಸಮಾನವಾಗಿ ನಿಲ್ಲಬಲ್ಲ ಶ್ರೇಷ್ಟರು ಸ್ವಾಮಿ ವಿವೇಕಾನಂದರು.
ಕನ್ಯಾಕುಮಾರಿ
ವಿವೇಕಾನಂದರು ಕೊನೆಯ ದಿನಗಳನ್ನು ಕಳೆದ ಸ್ಥಳ
ಎಲ್ಲಕ್ಕಿಂತಲೂ ಮಿಗಿಲಾಗಿ, ಯಾವಾಗ ಯಾವ ವಿಷಯಕ್ಕೆ ಆನಂದ ಹೊಂದಬೇಕು ಎಂದೇ ತಿಳಿಯದ ಈ ಕಾಲಘಟ್ಟದಲ್ಲೂ ವಿವೇಕದಲ್ಲೇ ಆನಂದ ಹೊಂದಬೇಕೆನ್ನುವುದಕ್ಕೆ ಸಾಕ್ಷಿಯಾಗಿ, ದೇಹ ತ್ಯಜಿಸಿದರೂ ಜೀವಂತ ಆದರ್ಶವಾಗಿ ಈ ಮಣ್ಣಲ್ಲಿ ಬೆರೆತುಹೋದವರು ನಮ್ಮ ನೆಚ್ಚಿನ ಕೆಚ್ಚೆದೆಯ ಸನ್ಯಾಸಿ ಸ್ವಾಮಿ ವಿವೇಕಾನಂದರು. ಇಂತಹ ಶತಮಾನದ ಸನ್ಯಾಸಿಯನ್ನು ಸ್ಮರಿಸಲೇ ಬೇಕಾದ ದಿನವಿದು. ಈ ಮಣ್ಣಿನ ಕಣಕಣದಲ್ಲಿ ಬೆರೆತುಹೋದ ವಿವೇಕಾನಂದರ ಆದರ್ಶವನ್ನು ಸರ್ವರೂ ರೂಢಿಸಿಕೊಳ್ಳಬೇಕಾದ ದಿನವಿದು. ಅದಕ್ಕಾಗಿ ಆರಿಸೋಣ, ರಾಷ್ಟ್ರೀಯತೆಯ ತೇಜೋಪುಂಜದ ದೃಢ ವಾಕ್ಯಗಳನ್ನು. ಆಲಂಗಿಸೋಣ, ಭರತಖಂಡದ ಅಮರತ್ವದ ಅಣುಅಣುವನ್ನೂ. ಆನಂದಿಸೋಣ, ಧಮನಿಧಮನಿಗಳಲ್ಲಿ ರಾಷ್ಟ್ರದುನ್ನತಿಯ ಚಿಂತನೆಗೈದ ಮಹಾನ್ ಚೇತನದ ದಿವ್ಯದಿನವನ್ನು… ರಾಷ್ಟ್ರಚಿಂತನೆಯಲ್ಲಿ.

Spread the love

Leave a Reply

Your email address will not be published. Required fields are marked *