ಬೆಂಗಳೂರು : ಕೆ.ಜಿ.ಎಫ್ ಚಾಪ್ಟರ್-2 ಚಿತ್ರೀಕರಣ ಆರಂಭಗೊಂಡಿದೆ. ಕೆ.ಜಿ.ಎಫ್. ಮೊದಲ ಭಾಗ ಇಡೀ ಭಾರತೀಯ ಸಿನಿಮಾ ರಸಿಕರನ್ನು ಸೆಳೆದಿತ್ತು. ಈ ಸಿನಿಮಾ ಒಂದರಿಂದಲೇ ಕನ್ನಡದ ಉದಯೋನ್ಮುಖ ನಟ ಯಶ್ ಇಂಡಿಯಾ ಲೆವೆಲ್ಲಿನ ಸ್ಟಾರ್ ಆಗಿಬಿಟ್ಟರು. ನಿರ್ದೇಶಕ ಪ್ರಶಾಂತ್ ನೀಲ್ʼಗೆ ಪರಭಾಷೆಗಳಿಂದ ಮೇಲಿಂದ ಮೇಲೆ ಆಫರ್ ಬರಲು ಶುರುವಾಯಿತು. ಈ ಸಿನಿಮಾದಲ್ಲಿ ಕೆಲಸ ಮಾಡಿದ ಪ್ರತಿಯೊಬ್ಬರೂ ದೊಡ್ಡ ಮಟ್ಟದಲ್ಲಿ ಗುರುತಿಸಿಕೊಂಡರು. ಚಾಪ್ಟರ್-೨ಗಂತೂ ಇನ್ನೂ ಚಿತ್ರೀಕರಣದ ಹಂತದಲ್ಲೇ ಎಲ್ಲಿಲ್ಲದ ಬೇಡಿಕೆ ಬಂದಿದೆ. ಸಂಜಯ್ ದತ್, ರವೀನಾ ಟಂಡನ್ ಇತ್ಯಾದಿ ಬಾಲಿವುಡ್ ಕಲಾವಿದರೂ ಈಗ ಕೆಜಿಎಫ್ ತಂಡ ಸೇರಿಕೊಂಡಿರುವುದು ಚಿತ್ರದ ಸ್ಟಾರ್ ವ್ಯಾಲ್ಯೂ ಹೆಚ್ಚಿಸಿದ್ದರೆ, ಪ್ರಕಾಶ್ ರೈ ಬರೋಣ ಅಭಿಮಾನಿಗಳನ್ನೂ ವಿರೋಧಿಗಳನ್ನೂ ಏಕಕಾಲಕ್ಕೆ ಹುಟ್ಟುಹಾಕಿದೆ. ಕೆಜಿಎಫ್ ಮೊದಲ ಭಾಗ ಕೋಲಾರದಲ್ಲಿ ಶೂಟಿಂಗ್ ಮಾಡಲಾಗಿತ್ತು. ಆದರೆ ಚಾಪ್ಟರ್-2 ಸೆಟ್ ಮಾತ್ರ ಪ್ರಸಿದ್ಧ ಸ್ಥಳವೊಂದರಲ್ಲಿ ಸಿದ್ಧವಾಗಿದೆ.
ಕೆ.ಜಿ.ಎಫ್ ಚಾಪ್ಟರ್-೨ಗಾಗಿ ಕಂಠೀರವ ಸ್ಟುಡಿಯೋದಲ್ಲಿ ಬೃಹತ್ ಸೆಟ್ ಹಾಕಲಾಗಿದೆ. 1980ರ ದಶಕದ ಕಾಲಘಟ್ಟಕ್ಕೆ ಹೊಂದುವಂತಿರುವ ವಿನ್ಯಾಸ ಇದರದ್ದಾಗಿದೆ. ಇಪ್ಪತ್ತೈದು ದಿನಗಳ ಕಾಲ ಇಲ್ಲಿಯೇ ಶೂಟಿಂಗ್ ನಡೆಯಲಿದೆ. ಪ್ರಕಾಶ್ ರೈ, ಮಾಳವಿಕಾ ಮತ್ತು ನಾಗಾಭರಣ ಭಾಗವಹಿಸಿರುವ ದೃಶ್ಯಗಳ ಚಿತ್ರೀಕರಣವೇ ಹತ್ತು ದಿನಗಳು ಸಾಗಲಿದೆ. ಈ ಹತ್ತು ದಿನಗಳಲ್ಲಿ ಯಶ್ ಭಾಗದ ಯಾವುದೇ ದೃಶ್ಯಗಳಿಲ್ಲದಿರುವುದರಿಂದ ರಾಕಿಂಗ್ ಸ್ಟಾರ್ ಹಾಜರಾತಿ ಇರೋದಿಲ್ಲ. ಉಳಿದ ಹದಿನೈದು ದಿನಗಳ ಚಿತ್ರೀಕರಣದಲ್ಲಿ ಯಾರೆಲ್ಲಾ ಭಾಗವಹಿಸುತ್ತಾರೆ ಎನ್ನುವ ಮಾಹಿತಿ ಸದ್ಯಕ್ಕಿಲ್ಲ.
ಈಗ ಬಂದಿರುವ ಮಾಹಿತಿಯ ಪ್ರಕಾರ ಅನಂತ್ ನಾಗ್ ಅವರ ಜಾಗಕ್ಕೆ ಪ್ರಕಾಶ್ ರೈ ಅವರು ಅವರ ಶಿಷ್ಯನಾಗಿ ಕಥೆ ಹೇಳಲಿದ್ದಾರೆ ಎನ್ನಲಾಗುತ್ತಿದೆ. ಕೆ ಜಿ ಎಫ್ ಮೊದಲ ಅಧ್ಯಾಯದಲ್ಲಿ ಇದೇ ಮಾಳವಿಕಾ ಬರಹಗಾರ ಅನಂತ್ (ಸೀನಿಯರ್ ಜರ್ನಲಿಸ್ಟ್ ಆನಂದ್ ಇಂಗಳಗಿ) ಜೊತೆ ಸಂದರ್ಶನ ನಡೆಸುವ ದೃಶ್ಯಗಳಿದ್ದವು. ನಾಗಾಭರಣ ಸಹ ವಾಹಿನಿಯ ಮುಖ್ಯಸ್ಥರಾಗಿ ಕಾಣಿಸಿಕೊಂಡಿದ್ದರು. ಆದರೀಗ ಮಾಳವಿಕಾ ಮತ್ತು ಭರಣ ಇದ್ದು, ಅನಂತ್ ಜಾಗಕ್ಕೆ ಪ್ರಕಾಶ್ ರೈ ಬಂದಿದ್ದಾರೆ ಅನ್ನೋದು ಮೇಲ್ನೋಟಕ್ಕೇ ಗೊತ್ತಾಗುತ್ತಿದೆ. ಒಂದು ವೇಳೆ ಚಿನ್ನದ ಗಣಿ ಮತ್ತು ಅಲ್ಲಿ ಬೆಂದು ಬಾಳಿದ ಜೀವಗಳ ಕುರಿತಾಗಿ ಮಾತಾಡಲು ಅನಂತ್ ಥರಹವೇ ಮತ್ತೊಬ್ಬ ವಿಶೇಷ ವ್ಯಕ್ತಿಯ ಪಾತ್ರ ಸೃಷ್ಟಿಯಾಗಿದ್ದರೂ ಇರಬಹುದು. ಕೆ.ಜಿ.ಎಫ್ ಬಿಡುಗಡೆಯ ಸಮಯದಲ್ಲಿ ಒಳ್ಳೆಯ ಪಬ್ಲಿಸಿಟಿ ಕಾರಣಕ್ಕೆ ಭಾರತದ ಎಲ್ಲೆಡೆ ಟಾಕ್ ಕ್ರಿಯೇಟ್ ಮಾಡಿತ್ತು. ಸಿನಿಮಾ ಕೂಡಾ ಗುಣಮಟ್ಟ ಉಳಿಸಿಕೊಂಡಿದ್ದರಿಂದ ಜನ ಇಷ್ಟ ಪಟ್ಟರು. ಅಂತಿಮವಾಗಿ ಕೆಜಿಎಫ್ ಗೆಲುವು ಕಂಡಿತು. ಈಗ ರೈಗೆ ವಿರೋಧಿಗಳೇ ಹೆಚ್ಚಾಗಿರುವುದರಿಂದ ಎಲ್ಲಡೆ ಸಿನಿಮಾ ನೋಡುವುದಿಲ್ಲ ಎನ್ನುವ ಗುಲ್ಲೂ ಹಬ್ಬಿರುವುದು ಚಿತ್ರತಂಡಕ್ಕೆ ತಲೆನೋವಾಗಿ ಪರಿಣಮಿಸಿದೆ. ಒಟ್ಟಿನಲ್ಲಿ ಚಿತ್ರ ಗೆದ್ದರೆ ಕನ್ನಡ ಸಿನಿಮಾ ಗೆದ್ದಂತೆ. ಸೋತರೆ ಕಲಾವಿದನೊಬ್ಬ ಸೋತಂತೆ ಎನ್ನುವ ಸ್ಥಿತಿ ಚಿತ್ರತಂಡದ್ದು.