ಚೆನ್ನೈ: 2020ರ ಚೆಸ್ ಒಲಂಪಿಯಾಂಡ್ ಪಂದ್ಯಾವಳಿಯಲ್ಲಿ ಭಾರತ ತಂಡ ವಿಜಯಪತಾಕೆ ಹಾರಿಸಿದೆ. ರಷ್ಯಾ ಜತೆ ಜಂಟಿಯಾಗಿ ಪ್ರಥಮ ಸ್ಥಾನ ಹಂಚಿಕೊಂಡಿರುವ ಭಾರತ ತಂಡ, ಒಲಂಪಿಯಾಡ್ ಕಿರೀಟವನ್ನು ಇತಿಹಾಸದಲ್ಲೇ ಮೊದಲ ಬಾರಿಗೆ ಮುಡಿಗೇರಿಸಿಕೊಂಡಿದೆ.
ಭಾರತ ತಂಡದ ಆಟಗಾರರಾದ ನಿಹಾಲ್ ಸರಿನ್ ಹಾಗೂ ದಿವ್ಯಾ ದೇಶ್‌ಮುಖ್ ಅವರ ಅಂತರ್ಜಾಲ ಸಂಪರ್ಕ ಕಡಿತಗೊಂಡು ಸಮಯ ನಿರ್ವಹಣೆಯಲ್ಲಿ ಸೋತಿದ್ದಾರೆ ಎಂದು ಘೋಷಿಸಲಾಗಿತ್ತು. ಪರಿಣಾಮವಾಗಿ ರಷ್ಯಾ ತಂಡವನ್ನು ವಿಜಯಿ ಎಂದು ಘೋಷಣೆಯನ್ನೂ ಮಾಡಲಾಗಿತ್ತು. ಆದರೆ ಭಾರತ ತಂಡ ಮರುಪರಿಶೀಲನೆಗೆ ಮನವಿ ಸಲ್ಲಿಸಿ ನಂತರದ ತೀರ್ಪಿನಿಂದಾಗಿ ಜಂಟಿಯಾಗಿ ಗೆಲುವು ಸಾಧಿಸಿದೆ ಎಂದು ನಿರ್ಧಾರವಾಗಿದ್ದು, ಭಾರತದ ಗೆಲುವಿನ ನಗೆಗೆ ಕಾರಣವಾಯಿತು.
ಇದೇ ಪ್ರಥಮ…
ಕೋವಿಡ್ ಕಾರಣದಿಂದಾಗಿ ಅಂತಾರಾಷ್ಟ್ರೀಯ ಚೆಸ್ ಫೆಡರೇಶನ್ ಇದೇ ಮೊದಲ ಬಾರಿಗೆ ಚೆಸ್ ಒಲಂಪಿಯಾಡ್ ಪಂದ್ಯಾವಳಿಯನ್ನು ಆನ್‌ಲೈನ್ ಮೂಲಕ ನಡೆಸಲು ನಿರ್ಧರಿಸಿತ್ತು. ಹಾಗಾಗಿ ಮೊದಲ ಬಾರಿಗೆ ಆನ್‌ಲೈನ್ ಮೂಲಕ ನಡೆದ ಪಂದ್ಯಾವಳಿಯಲ್ಲಿ ಪ್ರಥಮ ಬಾರಿಗೆ ಪ್ರಥಮ ಸ್ಥಾನ ಪಡೆದ ಹೆಗ್ಗಳಿಕೆ ಭಾರತ ತಂಡಕ್ಕೆ ಸಂದಿದೆ.
ಸುಲಭವಿರಲಿಲ್ಲ ವಿಜಯ…
ಪೊಲೆಂಡ್ ತಂಡವನ್ನು ಸೆಮಿಫೈನಲ್‌ನಲ್ಲಿ ಮಣಿಸಿ ಅಂತಿಮ ಘಟ್ಟಕ್ಕೆ ತಲುಪಿದ್ದ ಭಾರತಕ್ಕೆ ಇದುವರೆಗೆ 3ನೇ ಸ್ಥಾನ ದೊರಕಿದ್ದೇ ಹೆಚ್ಚು ಎನ್ನುವಂತಿತ್ತು. ಅದರಲ್ಲೂ ಬಲಿಷ್ಠವಾಗಿದ್ದ ರಷ್ಯಾದೆದುರು ಸೆಣಸುವಾಗ ಮೊದಲ ಸುತ್ತಿನಲ್ಲಿ 3-3 ಅಂತರದಲ್ಲಿ ಸಮಬಲ ಸಾಧಿಸುವಲ್ಲಿ ಭಾರತ ಯಶಸ್ವಿಯಾಯಿತು. ಆದರೆ ಎರಡನೇ ಸುತ್ತಿನಲ್ಲಿ 4.5-1.5 ಅಂಕಗಳ ಮೂಲಕ ಭಾರತಕ್ಕೆ ರಷ್ಯಾ ಆಘಾತ ನೀಡಿತು. ಇದರಲ್ಲಿ ಆಂಡ್ರೆ ಎಸಿಪೆಂಕೊ, ಸರಿನ್ ವಿರುದ್ಧ ಗೆದ್ದರೆ, ಪೊಲಿನಾ ಅವರು ದೇಶ್‌ಮುಖ್ ವಿರುದ್ಧ ಸಮಯದ ಮೇಲುಗೈ ಸಾಧಿಸಿದ್ದು, ವಿವಾದಕ್ಕೆ ಎಡೆ ಮಾಡಿಕೊಟ್ಟಿತು. ಎರಡನೇ ಸುತ್ತಿನಲ್ಲಿ ಕೊನೇರು ಹಂಪಿ ಅಲೆಕ್ಸಾಂಡ್ರಾ ವಿರುದ್ಧ ಸೋತರೆ, ಡಿ.ಹಾರಿಕಾ ಕೋಸ್ಟೆನಿಕ್ ವಿರುದ್ಧ ಡ್ರಾ ಸಾಧಿಸಿದ್ದರು. ವಿಶ್ವನಾಥನ್ ಆನಂದ್ ಹಾಗೂ ನಾಯಕ ವಿದಿತ್ ಗುಜರಾತಿ ಡ್ರಾ ಸಾಧಿಸುವಲ್ಲಿ ಯಶಸ್ವಿಯಾಗಿದ್ದರು. ಒಟ್ಟಿನಲ್ಲಿ ಅಂಕವನ್ನು ಗಮನಿಸುವಾಗ ರಷ್ಯಾದ ಕೈ ಮೇಲಾಗಿತ್ತು. ಕೊನೆಯಲ್ಲಿ ಮರುಪರಿಶೀಲನೆ ನಡೆಸಿದ ಫಿಡೆ ಅಧ್ಯಕ್ಷ ಅರ್ಕಾಡಿ ಡ್ವಾರ್ಕೊವಿಚ್ ಇತ್ತಂಡಗಳಿಗೂ ಚಿನ್ನದ ಪದಕ ನೀಡುವುದೆಂದು ನಿರ್ಧರಿಸಿದ್ದು, ಭಾರತದ ಐತಿಹಾಸಿಕ ಗೆಲುವಿಗೆ ನಾಂದಿ ಹಾಡಿತು.