ಕೊಚ್ಚಿನ್ : ರಾಜ್ಯದ ಮೊದಲ ತುರ್ತು ಚಿಕಿತ್ಸಾ ನಾವೆಯನ್ನು ಕೇರಳದ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ವಿಡಿಯೋ ಕಾನ್ಫರೆನ್ಸ್ ಮೂಲಕ ಗುರುವಾರ ಬೆಳಿಗ್ಗೆ 9.30ಕ್ಕೆ ಲೋಕಾರ್ಪಣೆ ಮಾಡಲಿದ್ದಾರೆ. ಪ್ರತೀಕ್ಷಾ ಎನ್ನುವ ನಾವೆಯ ಜತೆ ಪ್ರತ್ಯಾಶಾ ಹಾಗೂ ಕಾರುಣ್ಯಾ ಎಂಬ ಎರಡು ನಾವೆಗಳೂ ಲೋಕಾರ್ಪಣೆಗೊಳ್ಳಲಿವೆ ಎಂದು ಕೇರಳ ಸರ್ಕಾರದ ಮೂಲಗಳು ತಿಳಿಸಿವೆ.
ಸಮುದ್ರಮಧ್ಯದ ರಕ್ಷಣಾ ಕಾರ್ಯಾಚರಣೆಗಳಿಗಾಗಿ ಈ ಬೋಟ್‌ಗಳು ಕಾರ್ಯೋನ್ಮುಖವಾಗಲಿದ್ದು, ಅತ್ಯಂತ ಕಾರ್ಯಕ್ಷಮತೆಯಿರುವ ಬೋಟ್‌ಗಳ ಮೂಲಕ ರಕ್ಷಣೆ ಸುಲಭವಾಗಲಿದೆ ಎಂದು ಮೂಲಗಳು ತಿಳಿಸಿವೆ.
ಹೇಗಿರಲಿದೆ ಬೋಟ್?
23ಮೀ ಉದ್ದ ಹಾಗೂ 5.5 ಮೀ ಅಗಲದ ಈ ನೌಕೆಗಳು 14 ನಾಟಿಕಲ್ ಮೈಲ್ ಪ್ರತಿ ಗಂಟೆಯ ವೇಗದಲ್ಲಿ ಚಲಿಸಲಿವೆ. 10 ಜನರಿಗೆ ಏಕಕಾಲಕ್ಕೆ ಚಿಕಿತ್ಸೆ ಒದಗಿಸುವ ಸಾಮರ್ಥ್ಯವಿರುವ ಬೋಟ್‌ಗಳಲ್ಲಿ 4 ಜನ ಈಜುಗಾರರು, ಅಗತ್ಯ ಔಷಧಿಗಳು, ತಜ್ಞ ವೈದ್ಯರು ಹಾಗೂ ಶವಾಗಾರದ ವ್ಯವಸ್ಥೆ ಸಹ ಇರಲಿದೆ.
ಪ್ರತೀಕ್ಷಾ ನಾವೆಯು ತಿರುವನಂತಪುರಂ ಬಳಿಯ ವಿಝಿಂಜಮ್‌ನಲ್ಲಿ ನೆಲೆಯೂರಿದರೆ, ವೆಯಪೀನ್ ಮತ್ತು ಬೆಯಿಪೂರ್‌ನಲ್ಲಿ ಪ್ರತ್ಯಾಶಾ ಹಾಗೂ ಕಾರುಣ್ಯಾ ನಾವೆಗಳು ಲಂಗರು ಹಾಕಲಿವೆ. ಒಟ್ಟಾರೆ ರೂ.೧೮.೭೪ ಕೋಟಿ ವೆಚ್ಚದಲ್ಲಿ ತಯಾರಾಗಿರುವ ಈ ನಾವೆಗಳಿಗೆ ಬಿಪಿಸಿಎಲ್ ಹಾಗೂ ಕೇರಳ ಸರ್ಕಾರ ಜಂಟಿಯಾಗಿ ಹೂಡಿಕೆ ಮಾಡಿವೆ.