ಮೈಸೂರು: ಕೋವಿಡ್ ನಿರ್ವಹಣೆಗೆ ಸಂಬಂಧಪಟ್ಟಂತೆ ಜಿಲ್ಲಾಧಿಕಾರಿಗಳು ಮಾತ್ರ ಮಾತನಾಡುತ್ತಾರೆ. ಇಲ್ಲವೇ ಶಾಸಕರು ಮಾತನಾಡುತ್ತಾರೆ. ಆದರೆ, ಅಧಿಕಾರಿಗಳು ಬಹಳ ನಿಧಾನಗತಿ ಧೋರಣೆ ತಾಳುತ್ತಿದ್ದಾರೆ. ಇಂತಹ ಬೆಳವಣಿಗೆ ಬೇಡ, ನಾನು ಸಹಿಸುವುದಿಲ್ಲ. ಅಧಿಕಾರಿಗಳೇ ಸ್ವಯಂಪ್ರೇರಿತರಾಗಿ ಸಭೆಯಲ್ಲಿ ಆಯಾ ವಿಷಯಕ್ಕೆ ಸಂಬಂಧಪಟ್ಟಂತೆ ಮಾಹಿತಿಯನ್ನು ಕೊಡಬೇಕು. ಎಲ್ಲರೂ ಸೇರಿ ಕೆಲಸ ಮಾಡಿದರೆ ಮಾತ್ರ ಜಿಲ್ಲಾಡಳಿತಕ್ಕೆ ಒಳ್ಳೆಯ ಹೆಸರು ಬರುತ್ತದೆ ಎಂದು ಸಹಕಾರ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್.ಟಿ.ಸೋಮಶೇಖರ್ ಹೇಳಿದರು.
ಕೋವಿಡ್ 19 ಕ್ಕೆ ಸಂಬಂಧಪಟ್ಟಂತೆ ಮೈಸೂರು ಜಿಲ್ಲೆಯಲ್ಲಿ ತವಗವದುಕೊಳ್ಳಲಾದ ಹಾಗೂ ತೆಗೆದುಕೊಳ್ಳಲಿರುವ ಮುಂಜಾಗ್ರತಾ ಕ್ರಮಗಳ ಕುರಿತು ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಸಚಿವರು ಮಾತನಾಡಿದರು. ಇದೆಲ್ಲದರ ಜೊತೆಗೆ ಆಸ್ಪತ್ರೆಗಳಲ್ಲಿ ಸಮರ್ಪಕವಾಗಿ ಕಾರ್ಯನಿರ್ವಹಿಸಿದರೆ ದೂರುಗಳು, ಕಷ್ಟಗಳು ಗಮನಕ್ಕೆ ಬರುತ್ತವೆ. ಆ ಮಾಹಿತಿಗಳನ್ನು ಅಧಿಕಾರಿಗಳು ಜಿಲ್ಲಾಧಿಕಾರಿಗಳ ಗಮನಕ್ಕೆ ತಂದು ಬಗೆಹರಿಸಿಕೊಳ್ಳಬೇಕು. ಇಲ್ಲದಿದ್ದರೆ ತಮ್ಮ ಗಮನಕ್ಕೆ ತಂದರೆ ಸರ್ಕಾರದ ಮಟ್ಟದಲ್ಲಿ ಸಮಸ್ಯೆಗಳನ್ನು ಪರಿಹರಿಸಲಾಗುವುದು ಎಂದು ತಿಳಿಸಿದರು.
ಕೆಲಸ ಹೆಚ್ಚು ಮಾಡಿದರೆ ದೂರುಗಳು ಹೆಚ್ಚು ಬರುತ್ತವೆ, ಕಡಿಮೆ ಕೆಲಸ, ಕಡಿಮೆ ದೂರು, ಕೆಲಸವೇ ಮಾಡದಿದ್ದರೆ ದೂರೇ ಇಲ್ಲ ಎಂಬ ಮಾತಿದೆ. ಆದರೆ, ನಾವು ಹೆಚ್ಚು ಹೆಚ್ಚು ಕೆಲಸ ಮಾಡೋಣ ಎಂದು ಸಚಿವರು ಅಧಿಕಾರಿಗಳಿಗೆ ಕಿವಿಮಾತು ಹೇಳಿದರು.
ಸೋಂಕಿತರಿಗೆ ಮಾನಸಿಕ ಬಲ ತುಂಬಿ
ಕೋವಿಡ್ ಸೋಂಕಿತರಿಗೆ ಮಾನಸಿಕ ಬಲ ತುಂಬುವ ಕೆಲಸ ಆಗಬೇಕು. ಆಸ್ಪತ್ರೆಯ ಒಂದು ಆವರಣದಲ್ಲಿ ದಿನಕ್ಕೊಮ್ಮೆ ಎಲ್ಲ ಸೋಂಕಿತರನ್ನು ಕರೆಸಿ ಅವರಿಗೆ ಪಿಪಿಇ ಕಿಟ್ ಧರಿಸಿದ ಯೋಗ ಶಿಕ್ಷಕರಿಂದ ಯೋಗಾಭ್ಯಾಸ ಮಾಡಿಸುವುದು, ತಜ್ಞ ವೈದ್ಯರಿಂದ ಅಗತ್ಯ ಸಲಹೆ ಹಾಗೂ ಮಾರ್ಗದರ್ಶನ ಕೊಡಿಸುವಂತಹ ಕೆಲಸ ಆಗಬೇಕು. ಈ ನಿಟ್ಟಿನಲ್ಲಿ ಕಾರ್ಯನಿರ್ವಹಿಸಿ ಎಂದು ಸಚಿವ ಸೋಮಶೇಖರ್ ಅವರು ಸೂಚನೆ ನೀಡಿದರು.
ಮುಖ್ಯಮಂತ್ರಿಗಳಿಂದ ಅವಿರತ ಶ್ರಮ
ಮುಖ್ಯಮಂತ್ರಿಗಳು 24×7 ಮಾದರಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ಬೇರೆ ಯಾವುದೇ ಕೆಲಸಗಳತ್ತ ಚಿಂತನೆ ಮಾಡದೆ ಕೋವಿಡ್ ಸಂಕಷ್ಟಗಳಿಂದ ದೂರ ಮಾಡಲು ಪ್ರಯತ್ನಪಡುತ್ತಿದ್ದಾರೆ. ನಾವು ಅದಕ್ಕಾಗಿಯೇ ಮೈಸೂರಿನಲ್ಲಿ ದಸರಾ ಸಹಿತ ಯಾವುದೇ ಕಾರ್ಯಗಳತ್ತ ಒತ್ತು ಕೊಡದೆ ಜನರ ಆರೋಗ್ಯವನ್ನು ಕಾಪಾಡುವ ಸಲುವಾಗಿ ಹೆಚ್ಚಿನ ನಿಗಾ ವಹಿಸುತ್ತಿದ್ದಾರೆ. ಏನೇ ಸಮಸ್ಯೆ ಇದ್ದರೆ ನಾವು ಬಗೆಹರಿಸುತ್ತೇವೆ. ಅಧಿಕಾರಿಗಳು ಸಹ ಆ ನಿಟ್ಟಿನಲ್ಲಿ ಕೆಲಸ ಮಾಡಬೇಕು ಎಂದು ಸಚಿವರು ತಿಳಿಸಿದರು. ಇದೇ ಸಂದರ್ಭದಲ್ಲಿ ಪಾಲಿಕೆ ವ್ಯಾಪ್ತಿ, ತಾಲೂಕುವಾರು ಕೋವಿಡ್ ಸ್ಥಿತಿಗತಿಗಳು, ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆಗಳಲ್ಲಿ ದಾಖಲಾಗಿರುವ ಸೋಂಕಿತರ ವಿವರ, ಹಾಸಿಗೆ ವ್ಯವಸ್ಥೆ ಇತ್ಯಾದಿಗಳ ಬಗ್ಗೆ ಮಾಹಿತಿಯನ್ನು ಪಡೆದು ಕೆಲವು ಸಲಹೆ, ಸೂಚನೆಗಳನ್ನು ನೀಡಲಾಯಿತು.