ಮಂಗಳೂರಿಗೆ ಶಿರಾಡಿ ಘಾಟಿಯ ಮೂಲಕ ಪ್ರಯಾಣ ಮಾಡುವ ಯಾರಿಗೇ ಆದರೂ ಗುಂಡ್ಯ ಸಮೀಪಿಸುತ್ತಿದ್ದಂತೆಯೇ ಗೋಡಂಬಿ ಬಾದಾಮಿ ಪಿಸ್ತಾ ಮುಂತಾದ ಒಣಹಣ್ಣುಗಳು ಮತ್ತು ನಟ್ಸ್ ಅನ್ನು ಮಾರಾಟ ಮಾಡುವವರ ಗುಂಪುಗಳು ಕಂಡೇ ಕಾಣುತ್ತವೆ.
ಗುಂಡ್ಯದಿಂದ ಈಚೆಗೆ ಹತ್ತು ಕಿಮಿ ವ್ಯಾಪ್ತಿಯಲ್ಲಿ ಐದಾರು ವಾಹನಗಳಲ್ಲಿ (ಮಾರುತಿ ಒಮ್ನಿ,೮೦೦)ಕಾರು ಭರ್ತಿ ಈ ಒಣಹಣ್ಣು ಮತ್ತು ನಟ್ಸಗಳನ್ನು ತುಂಬಿಕೊಂಡು ,ಇದಿರಾಗುವ ವಾಹನಗಳನ್ನು ಸೆಳೆಯಲು ಕೊಂಚ ರಸ್ತೆಗೇ ಬರುವ ಆ ವ್ಯಾಪಾರಿ ಯುವಕರು ಕೇರಳದ ಕಡೆಯ ಹುಡುಗರಂತೆ ಕಾಣುತ್ತಾರೆ.ಬಹುತೇಕ ಇಪ್ಪತ್ತ ರಿಂದ ಮೂವತೈದು ವಯಸ್ಸು.
ಹೊರಗಡೆ ಕೆಜಿಗೆ ಸಾವಿರ – ಸಾವಿರದಿನ್ನೂರು ಇರುವ ಈ ಸರಕು ಇವರ ಬಳಿ ಐನೂರು ರೂಪಾಯಿಗೆ ದೊರಕುತ್ತದೆ.
ಮೊನ್ನೆ ಕುಕ್ಕೆ ಸುಬ್ರಹ್ಮಣ್ಯಕ್ಕೆ ಹೋದಾಗ ಅಲ್ಲಿಯೂ ಈಚೆಗೆ ಹೇರಳವಾಗಿ ದೊರೆಯುತ್ತಿರುವ ಈ ಡ್ರೈಫ್ರೂಟ್ಸ್ಗಳನ್ನು ಖರೀದಿಸಿ ಗುಂಡ್ಯದವರೆಗೂ ಮೆಲ್ಲುತ್ತಾ ಅದರ ರುಚಿಗೂ ಗುಣಮಟ್ಟಕ್ಕೂ ಮಾರುಹೋಗಿ ಹೊರಗಿನ ಅಂಗಡಿಗಳ ಲಾಭಕೋರತನದ ಬಗ್ಗೆ ಮಾತಾಡುತ್ತಾ ಗುಂಡ್ಯ ತಲುಪಿದಾಗ ಕಾರಿನಲ್ಲಿ ಪೇರಿಸಿಕೊಂಡಿದ್ದ ಇದೇ ಈ ಸರಕುಗಳನ್ನು ಕಂಡು ಕುತೂಹಲ ಹೆಚ್ಚಿತು.
ಕುಕ್ಕೆಯ ಬೆಲೆಗೂ ಇಲ್ಲಿಯ ಬೆಲೆಗೂ ಹೋಲಿಸುವ ಸೆಳೆತವಾಗಿ ಇಳಿದೆವು.
ಬೆಲೆ ಕುಕ್ಕೆಗಿಂತಲೂ ನೂರಿನ್ನುರು ಕಡಿಮೆ ಇದ್ದದ್ದು ಕೇಳಿ ಮಳ್ಳಮನಸ್ಸು ಸಣ್ಣಗೆ ಹೊಯ್ದಾಡಿತು.
ಆ ಯುವಕರ ವೇಷ ದಿಂದಾಗಿ ಆತಂಕದ ಎಳೆಯೊಂದು ಸರಿದು ಹೋದರೂ ‘ನಮ್ಮ ಯೋಚನೆಗಳು ಹೀಗೇ ಸಾಗೋದ್ರಿಂದಲೇ ಅವರಲ್ಲೂ ಸಂಕಟ ಮನೆ ಮಾಡುವುದು’ಎನಿಸಿ ಆ ಭಾವವನ್ನು ಆಚೆ ಹಾಕಿದೆ.
ವ್ಯಾಪಾರ ಸಂಬಂಧಿ ಮಾತುಕತೆ ಆರಂಭವಾದವು.
‘ಎಲ್ಲಿಂದ ತರ್ತೀರಾ ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ’
‘ಲೋಕಲ್ ಮೇಡಮ್’
‘ಲೋಕಲ್ಲಾ..ಗೋಡಂಬಿ ಸಿಗಬಹುದು.ಉಳಿದಿದ್ದು?’
‘ಹೊರಗಿಂದ ತರಿಸ್ತಿವಿ’
“ಸರಿ ಬಿಡಿ.ಈಗ ನಾವು ತಗೋ ಬೇಕು ಅಂದರೆ ಟೇಸ್ಟ್ ನೋಡ್ಲಿಕ್ಕೆ ಎರಡಾದರೂ ಕೊಡಬೇಕಲ್ವಾ’
‘ಎರಡು ಕಾಸು ಲಾಭಕ್ಕಾಗಿ ಮಾಡ್ತಿವಿ ಮೇಡಮ್.ಬೇಕಾದ್ರೆ ನೀವು ತಗೋತಿರಲ್ಲ.ಅದನ್ನೇ ಓಪನ್ ಮಾಡಿ ಕೊಡ್ತಿವಿ.ಟೇಸ್ಟ್ ನೋಡಿ’
”ಅಯ್ಯೋ..ಉಹು.ಹಂಗಾದರೆ ಅದನ್ನು ಕ್ಯಾರಿ ಮಾಡ್ಲಿಕ್ಕೆ ಮತ್ತೊಂದು ಕವರ್ ಹೊಂದಿಸಬೇಕು.ಜೊತೆಗೆ ಗಾಳಿ ಹೋದರೆ ನಟ್ಸ್ ನ ತಾಜಾತನ ಹೋಗ್ತದೆ’
‘ಎಲ್ಲಿ…ಆ ಪ್ಯಾಕ್ ಕೊಡಿಯಿಲ್ಲಿ’
ಪ್ಯಾಕೆಟ್ ನೋಡಿ ಹಿಂದೆಮುಂದೆ ತಿರುಗಿಸಿ ಗೋಡಂಬಿ ಬಾದಾಮಿಯ ಬಣ್ಣ ಸೈಝು ನೋಡಿ ತಗೋಳುವ ಮನಸ್ಸು ಮಾಡಿದೆವು.
ಎರಡೂ ಒಂದೊಂದು ಕೆಜಿ ತಗೊಂಡು ಕಾರಿಗೆ ಕೂತಮೇಲೂ ಇಷ್ಟು ಕಡಿಮೆ ಬೆಲೆಗೆ ಹೇಗೆ ಮಾರ್ತಾರೆ ಎನ್ನುವ ಚರ್ಚೆ ಮುಂದುವರೆಯಿತು.
ಅಷ್ಟರಲ್ಲಿ ಮೊಬೈಲಿಗೆ ಮೆಸೇಜ್ ನೋಟಿಫಿಕೇಷನ್.
ನೋಡಿದರೆ ಶಿರಾಡಿಯಲ್ಲಿ ನಕಲಿ ಬಾದಾಮಿ ಗೋಡಂಬಿಗಳ ದಂಧೆ.ವಿಷಯುಕ್ತ ಕೆಮಿಕಲ್ ಗಳಿಂದ ತುಂಬಿವೆ ತಿನ್ನುವ ಪದಾರ್ಥಗಳು.
ಅಂತ ಇಷ್ಟುದ್ಧದ ಮೆಸೇಜಿತ್ತು.
ಪಾಪದ ಹುಡುಗರು ಲಾಭದ ಆಸೆಗೆ ಎಂಥದ್ದೋ ವ್ಯಾಪಾರ ಮಾಡಿದ್ರೆ ಅದಕ್ಕೂ ಈ ವಾಟ್ಸಪ್ ಯುನಿವರ್ಸಿಟಿ ಕಲ್ಲು ಹಾಕ್ತದಲ್ಲ ಅಂದುಕೊಂಡವಳು ಆ ವಿಷಯ ಅಲ್ಲಿಗೆ ಬಿಟ್ಟೆ.
ಮೊನ್ನೆ ಅಪ್ಪ ಕಾಲ್ ಮಾಡಿ ನರಳಿದಂತೆ ಮಾತಾಡಿದ್ರು.
ಬೆಳಿಗ್ಗೆ ಹತ್ತು ಸಾಯಂಕಲ ಸಲ ಒಂದು ಐದಾರು ಬಾಯಿಗೆ ಹೊಕ್ಕೊಂಡಿದ್ದೆ ನಿನ್ನೆ.
ಇವತ್ತು ತೋಟಕ್ಕೆ ಬಂದು ಸ್ವಲ್ಪ ಹೊತ್ತಿಗೇ ಬೆನ್ನು ಮೂಳೆಲಿ ವಿಪರೀತ ನೋವು.. ಮೈಯೆಲ್ಲ ಬೆವರು ಅಂದರು.
ಏನೋ ವ್ಯತ್ಯಾಸ ಆಗಿರಬೇಕು ಎನಿಸಿ ಒಂದಿನವೂ ರೆಸ್ಟ್ ಮಾಡದೇ ಇದ್ರೆ ಇನ್ನೇನಾಗುತ್ತೆ ಅಪ್ಪಾಜಿ ಅಂದೆ.
ನಂಗೊತ್ತಿದೆ ಅವರು ತಿರುಗಾಡ್ತಿದ್ರೇ ಆರೋಗ್ಯವಾಗಿರ್ತಾರೆ ಅಂತ.ಮಾರನೇ ದಿನ ಅಮ್ಮ ಫೋನ್ ಮಾಡಿ ಕಾಲು ವಿಪರೀತ ನೋವು.ಸಂಕಟ ಅಂದರು.ಅದಾಗಿ ಸ್ವಲ್ಪ ಹೊತ್ತಿಗೇ ಅಪ್ಪ ಮತ್ತೆ ಫೋನ್ ಮಾಡಿ ಕೆಳಗಿನ ತುಟಿ ಮರಗಟ್ಟಿದಂತೆ ಆಗ್ತಿದೆ.ಏನು ಕಥೆಯೋ ಏನೋ ಅಂದರು.
ಧ್ವನಿಯಲ್ಲಿ ಆತಂಕ ಎದ್ದು ಕಾಣ್ತಿತ್ತು.
ಬಹುಶಃ ಗುಂಡ್ಯದ ಬಾದಾಮಿ ಗೋಡಂಬಿ ಪ್ರಭಾವ ಬೀರಿದ್ದವು.ಸಾಮಾನ್ಯವಾಗಿ ಡ್ರೈ ಫ್ರೂಟ್ಸ್ ಗಳನ್ನು ಮೆಲ್ಲುವಾಗ ಹುಟ್ಟುವ ಟೆಂಪ್ಟಿಂಗ್ ಟೇಸ್ಟ್ ಗೆ ಬದಲಿಗೆ ಇಲ್ಲಿ ಖರೀದಿಸಿದ ಗೋಡಂಬಿ ತಿನ್ನುವಾಗ ಚುರುಚುರು ಎನ್ನುವ ಉರಿಯಂತ ಫೀಲಿಂಗ್ ಆಗ್ತದೆ.
ಮೂರನೇ ದಿನಕ್ಕೆ ಬಾದಾಮಿ ಗೋಡಂಬಿ ತಿಪ್ಪೆ ಸೇರಿದ್ದವು.
ಇಲ್ಲಿನ ಸತ್ಯಾಸತ್ಯತೆ ಏನಿದೆಯೋ ಗೊತ್ತಿಲ್ಲ.
ಆದರೆ
ಮತ್ತೆ ನೆನಪಿಸಿಕೊಂಡರೆ ಸ್ಯಾಂಪಲ್ ಟೇಸ್ಟ್ ಗೆ ಕೊಡುವುದಿಲ್ಲ ಎನ್ನುವ ಅವರ ಮಾತು ಮತ್ತು ತಿಂದಾದ ನಂತರದ ನಾಲಿಗೆಯುರಿ ಎರಡೂ ಹೊಂದಿಕೆಯಾಗುತ್ತಿವೆ.
….
ವ್ಯಾಪಾರಂ ದ್ರೋಹ ಲಕ್ಷಣಂ ಅಂತಾರೆ.ಲಾಭಕ್ಕಾಗಿ ಮಾಡುವುದಾದರೆ ಮಾಡಿಕೊಳ್ಳಲಿ.ಒಂದೆರಡು ನೂರುಗಳು ಹೆಚ್ಚಿಗೆ ಕೈ ಬಿಟ್ಟಿದ್ದರೆ ಒಂದು ದಿನದ ಕಿರಿಕಿರಿ ಅಷ್ಟೇ. ಆದರೆ ಆರೋಗ್ಯ?
ಆರೋಗ್ಯದ ಜೊತೆಗೆ ಚೆಲ್ಲಾಟವಾಡುವ ಇಂತಹ ಸಂಗತಿಗಳು ಇಡೀ ಸಾಮಾಜಿಕ ವ್ಯವಸ್ಥೆಯನ್ನೇ ಬುಡಮೇಲು ಮಾಡುವ ಸಾಧ್ಯತೆ ಇವೆ.
ಗುಂಡ್ಯದಲ್ಲಿ ಕೊಂಡ ಬಾದಾಮಿಯನ್ನು ಸಕಲೇಶಪುರ ತಲುಪುವವರೆಗೂ ಮೆಲ್ಲುತ್ತಾ ಬಂದರೆ ಸೀದಾ ಆಸ್ಪತ್ರೆ ನೋಡಲೇಬೇಕೇನೋ?
ಆದರೆ
ಸರಿಪಡಿಸಲಾಗದ ತೊಂದರೆಗಳು ಈ ವಿಷಗಳಿಂದ ಆಗಿದ್ದರೆ?
ಗುಂಡ್ಯ ಮತ್ತು ಶಿರಾಡಿಯನ್ನು ಅಪರಾಧಿಗಳ ಅಡ್ಡೆ ಎನ್ನುವುದನ್ನು ಕೇಳ್ತಿರ್ತೀವಿ.
ಇಲ್ಲಿನ ಪೋಲಿಸ್ ವ್ಯವಸ್ಥೆ ಏನು ಮಾಡ್ತಿದೆ?
ಗಡಿಯ ಚೌಡೇಶ್ವರಿ ದೇವಸ್ಥಾನದವರೆಗೂ ಸಕಲೇಶಪುರ ಪೋಲಿಸ್ ಠಾಣಾ ವ್ಯಾಪ್ತಿಗೆ ಬರುತ್ತದೆ.
ಅಲ್ಲಿಂದ ಮುಂದೆ ಅಡ್ಡೊಳೆ ವ್ಯಾಪ್ತಿ ಈಗಲೂ ಸ್ವಲ್ಪ ಭಯ ತರುವ ಜಾಗವೇ.
ಗುಂಡ್ಯದಲ್ಲಿ ದಿನೇದಿನೇ ಚಿತ್ರವಿಚಿತ್ರ ಅಪರಾಧಗಳ ಸಂಖ್ಯೆ ಏರುತ್ತಿದೆ.
ಹೀಗೆ ದಾರಿಯಲ್ಲಿ ನಿಂತು ಮಾರುತ್ತಿರುವ ಆಹಾರ ಪದಾರ್ಥಗಳ ಗುಣಮಟ್ಟದ ಕುರಿತು ದೂರು ಹೇಳುವುದು ಯಾರಿಗೆ?
ಆ ಪ್ಯಾಕ್ಗಳ ಮೇಲೆ ಆಹಾರ ಗುಣಮಟ್ಟ ಖಾತ್ರಿಯ ಯಾವುದೇ ಬರಹವಾಗಲಿ ಎಕ್ಸಪೈರಿ ದಿನಾಂಕವಾಗಲಿ ಇರಲಿಲ್ಲ ಎನ್ನುವುದು ಈಗ ಯೋಚಿಸುವಾಗ ತಿಳಿಯುತ್ತಿದೆ.
ಸಕಲೇಶಪುರ ಕ್ಕೋ, ದಕಕ್ಕೋ ಕರೆ ಮಾಡಿ ಹೇಳಿದ್ರೆ ಆಗಲಿ ಮೇಡಮ್ ವಿಚಾರಿಸ್ತೀವಿ ಅನ್ನುವ ಭರವಸೆ ಹುಸಿಯೆಂಬುದು ಅವರ ಧ್ವನಿಯಲ್ಲೇ ಗೊತ್ತಾಗುತ್ತದೆ.
ಇನ್ನು ಗಾಢ ನಿದ್ದೆಯಲ್ಲಿರುವ ನಮ್ಮ ಜನಪ್ರತಿನಿಧಿಗಳಿಗೆ ಝಣಝಣದ ಸದ್ದು ಕೇಳದೆ ಎಚ್ಚರಾಗುವುದಿಲ್ಲ.ಅದೂ ಅಲ್ಲದೇ ಎಲ್ಲಕ್ಕೂ ಅವರೇ ಬನ್ನಿ ಎನ್ನುವುದು ಹಾಸ್ಯಾಸ್ಪದ ಆಗ್ತದೆ.
ಸಕಲೇಶಪುರ ದಲ್ಲಿ ಸಾಕಷ್ಟು ಪತ್ರಕರ್ತರಿದ್ದಾರೆ.ಅವರಿಗೆ ಈ ಕುರಿತು ಏನೂ ಅನಿಸ್ತಿಲ್ಲವೆ?
ಅಥವಾ ಅನಿಸಿದ್ರೂ ಸಾಯಲಿ ಬಿಡು ಎನ್ನುವ ತಾತ್ಸರವೇ?
ಆದರೆ
ಇದು ಆರೋಗ್ಯದ ಸಂಗತಿ.
ಸರಿಪಡಿಸಲಾಗದಷ್ಟು ಆರೋಗ್ಯ ಹಾಳಾದರೆ??