ಬೆಂಗಳೂರು : ಕೊರೋನಾ ಭೀತಿ ನಡುವೆ ರಾಜ್ಯದಲ್ಲಿ ಸೆಪ್ಟೆಂಬರ್ನಿಂದ ಶಾಲೆಗಳನ್ನು ಆರಂಭಿಸಲಾಗುತ್ತದೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಪೋಷಕರು ಹಾಗೂ ವಿದ್ಯಾರ್ಥಿಗಳಲ್ಲಿ ಈ ಬಗ್ಗೆ ಗೊಂದಲಗಳು ಸಹ ಮೂಡಿವೆ. ಆದರೆ ಈ ಬಗ್ಗೆ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಸುರೇಶ್ ಕುಮಾರ್ ಸ್ಪಷ್ಟನೆ ನೀಡಿದ್ದಾರೆ.
ಮಂಡ್ಯದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈಗ ನಮ್ಮ ಮುಂದೆ ದೊಡ್ಡ ಸವಾಲು ಇದೆ. ಮುಂದಿನ ಶೈಕ್ಷಣಿಕ ದಿನಗಳು ಹೇಗೆ ಎಂದು ಯೋಚನೆ ಮಾಡುವಂತಾಗಿದೆ. ಸುರೇಶ್ ಕುಮಾರ್ ಶಾಲೆ ಪ್ರಾರಂಭ ಮಾಡಲು ತುದಿಗಾಲಿನಲ್ಲಿ ನಿಂತಿದ್ದಾರೆ ಎಂಬ ಬಿರುದನ್ನೂ ನನಗೆ ಕೊಟ್ಟಿದ್ದಾರೆ. ಖಂಡಿತ ಯಾವುದೇ ಕಾರಣಕ್ಕೂ ಸೆಪ್ಟೆಂಬರ್ನಿಂದ ಶಾಲೆಗಳನ್ನು ಪ್ರಾರಂಭಿಸಲ್ಲ ಎಂದು ಸಚಿವ ಸುರೇಶ್ ಕುಮಾರ್ ಸ್ಪಷ್ಟಪಡಿಸಿದ್ದಾರೆ.
ಮುಂದುವರೆದ ಅವರು, ನನಗೆ ಬಹಳ ಮುಖ್ಯವಾದ ಆದ್ಯತೆ ಅಂದ್ರೆ, ನಮ್ಮ ಮಕ್ಕಳ ಆರೋಗ್ಯ. ಅದನ್ನ ಬಹಳ ಸುರಕ್ಷತಾ ದೃಷ್ಠಿಯಿಂದ ನೋಡಬೇಕು. ಜೊತೆಗೆ ನಮ್ಮ ಮಕ್ಕಳ ಕಲಿಕೆ ಹೇಗೆ? ಯಾವ ರೀತಿ ಕಲಿಕೆಯನ್ನು ಮುಂದುವರಿಸಬಹುದು ಎಂಬುದಕ್ಕೆ ಈಗಾಗಲೇ ನಮ್ಮ ರಾಜ್ಯದಲ್ಲಿ ವಿದ್ಯಾಗಮನ ಎಂಬ ಯೋಜನೆಯನ್ನು ತರಲಾಗಿದೆ. ಈ ವಿದ್ಯಾಗಮನ ಯೋಜನೆ ಇಡೀ ರಾಷ್ಟ್ರವೇ ನೋಡುವಂತ ಅತ್ಯುತ್ತಮ ಯೋಜನೆ ಎಂದು ಹೇಳಿದರು.
ಇದೇ ವೇಳೆ, ಶಿಕ್ಷಕರು ಮಕ್ಕಳು ಇರುವ ಕಡೆ ಹೋಗಿ ಮಕ್ಕಳ ಕಲಿಕೆಗೆ ಪ್ರೋತ್ಸಾಹ ಕೊಟ್ಟು ಕಲಿಸುತ್ತಿದ್ದಾರೆ ಎಂದರು. ಮಳವಳ್ಳಿ ತಾಲೂಕಿನ ಕೆಂಪ್ಪಯ್ಯನದೊಡ್ಡಿಗೆ ಹೋಗಿದ್ದೆ. ಶಿಕ್ಷಕರು ಊರಿನ ಪಡಶಾಲೆಯಲ್ಲಿ ಮಕ್ಕಳಿಗೆ ಮಾಡ್ತಿದ್ದಾರೆ. ಕೊರೋನಾ ಕಾಲದಲ್ಲಿ ಕೂಡ ನಮ್ಮ ಮಕ್ಕಳು ಯಾವುದೇ ಖಿನ್ನತೆಗೆ ಒಳಗಾಗಬಾರದು. ಅದಕ್ಕಾಗಿ ಅವರಿಗೆ ಕಲಿಕೆ ಮುಂದುವರಿಸಬೇಕು ಎಂದು ತಿಳಿಸಿದರು.