ನವದೆಹಲಿ: ಉಳಿದೆಲ್ಲಾ ಕ್ಷೇತ್ರಗಳಿಗಿಂತಲೂ ರಕ್ಷಣಾ ಕ್ಷೇತ್ರದಲ್ಲಿ ಭಾರತ ಆತ್ಮ ನಿರ್ಭರವಾಗಬೇಕಿರುವುದು ಅತೀ ಅವಶ್ಯ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅಭಿಪ್ರಾಯಪಟ್ಟಿದ್ದಾರೆ.
ಆತ್ಮ ನಿರ್ಭರ ಸಪ್ತಾಹ ಕಾರ್ಯಕ್ರಮವನ್ನು ವಿಡಿಯೋ ಕಾನ್ಫರೆನ್ಸ್ ಮೂಲಕ ಉದ್ಘಾಟಿಸಿ ಮಾತನಾಡಿದ ರಾಜನಾಥ್ ಸಿಂಗ್, ರಕ್ಷಣಾ ಕ್ಷೇತ್ರದಲ್ಲಿ ಸ್ವವಲಂಬಿಯಾಗುವುದು ನಮ್ಮ ಸರ್ಕಾರದ ಗುರಿ ಎಂದು ಹೇಳಿದರು.
ರಕ್ಷಣೆ ಅತೀ ಸೂಕ್ಷ್ಮ ವಿಷಯವಾಗಿದ್ದು, ಈ ಕ್ಷೇತ್ರದಲ್ಲಿ ಮತ್ತೊಬ್ಬರ ಮೇಲಿನ ಅವಲಂಬನೆ ಕಡಿಮೆ ಮಾಡಬೇಕಿರುವುದು ನಮ್ಮ ಕರ್ತವ್ಯ ಎಂದು ರಾಜನಾಥ್ ಸಿಂಗ್ ನುಡಿದರು.
ಭಾರತಕ್ಕೆ ನೆರೆಯ ರಾಷ್ಟ್ರಗಳಿಂದ ನಿರಂತರವಾಗಿ ಬೆದರಿಕೆಯಿದ್ದು, ಈ ಬೆದರಿಕೆಯನ್ನು ಸಮರ್ಥವಾಗಿ ಎದುರಿಸಲು ಭಾರತ ರಕ್ಷಣಾ ಕ್ಷೇತ್ರದಲ್ಲಿ ಆತ್ಮ ನಿರ್ಭರವಾಗಬೇಕಿರುವುದು ಅತ್ಯಂತ ಅವಶ್ಯ ಎಂದು ರಾಜನಾಥ್ ಸಿಂಗ್ ಅಭಿಪ್ರಾಯಪಟ್ಟಿದ್ದಾರೆ.
ಭಾರತದಂತ ವಿಶಾಲ ಆರ್ಥಿಕ ವ್ಯವಸ್ಥೆಯನ್ನು ಆತ್ಮ ನಿರ್ಭರವನ್ನಾಗಿ ಮಾಡಲು ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಪ್ರಾಮಾಣಿಕ ಪ್ರಯತ್ನ ನಡೆಸಿದ್ದು, ಮುಂದಿನ ಆರು ವರ್ಷಗಳ ಅವಧಿಯಲ್ಲಿ ಭಾರತದ ರಕ್ಷಣಾ ಕ್ಷೇತ್ರದಲ್ಲಿ ಗಮನಾರ್ಹ ಬದಲಾವಣೆಗಳಾಗಲಿವೆ ಎಂದು ರಾಜನಾಥ್ ಸಿಂಗ್ ಭವಿಷ್ಯದ ಯೋಜನೆಗಳ ಮುನ್ಸೂಚನೆ ನೀಡಿದರು.
ರಕ್ಷಣಾ ಕ್ಷೇತ್ರದ ಸಾರ್ವಜನಿಕ ಉದ್ಯಮಗಳು ಹಾಗೂ ಆರ್ಡಿನೆನ್ಸ್ ಫ್ಯಾಕ್ಟರಿ ಬೋರ್ಡ್ ಈ ನಿಟ್ಟಿನಲ್ಲಿ ಕಾರ್ಯೋನ್ಮುಖವಾಗಬೇಕಿದ್ದು, ಕಾಲ ಕಾಲಕ್ಕೆ ಸರ್ಕಾರದಿಂದ ಸೂಕ್ತ ನಿರ್ದೇಶನಗಳನ್ನು ನೀಡಲಾಗುವುದು ಎಂದು ರಾಜನಾಥ್ ಸಿಂಗ್ ಸ್ಪಷ್ಟಪಡಿಸಿದರು.