ಜೈಪುರ(ಆ. 13): ಪಕ್ಷದೊಳಗಿನ ಸಚಿನ್ ಪೈಲಟ್ ಬಂಡಾಯದ ಬಿಕ್ಕಟ್ಟು ಶಮನಗೊಂಡು ಎಲ್ಲವೂ ಸರಿಯಾಯಿತು ಎಂದು ರಾಜಸ್ಥಾನ ಸಿಎಂ ಅಶೋಕ್ ಗೆಹ್ಲೋಟ್ ನಿಟ್ಟುಸಿರು ಬಿಡುತ್ತಿರುವಂತೆಯೇ ಬಿಜೆಪಿ ಹೊಸ ಬಾಣ ಹೂಡುತ್ತಿದೆ. ನಾಳೆ, ಶುಕ್ರವಾರದಂದು ಕಾಂಗ್ರೆಸ್ ಸರ್ಕಾರದ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಲು ಬಿಜೆಪಿ ನಿರ್ಧರಿಸಿದೆ. ಇವತ್ತು ನಡೆದ ಬಿಜೆಪಿ ಶಾಸಕಾಂಗ ಪಕ್ಷದ ಸಭೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಸಭೆಯ ನಂತರ ವಿಪಕ್ಷ ನಾಯಕ ಗುಲಾಬ್ ಚಂದ್ ಕಟಾರಿಯಾ ಅವರು ಈ ನಿರ್ಧಾರವನ್ನು ಮಾಧ್ಯಮಗಳಿಗೆ ತಿಳಿಸಿದರು. ನಾಳೆ ಪ್ರಾರಂಭಗೊಳ್ಳುವು ವಿಧಾನಸಭಾ ಅಧಿವೇಶನದಲ್ಲಿ ಅವಿಶ್ವಾಸ ನಿರ್ಣಯ ಮಂಡಿಸುತ್ತಿರುವುದಾಗಿ ಬಿಜೆಪಿ ನಾಯಕ ಹೇಳಿದರು.
“ಕೊರೋನಾ ವೈರಸ್ ಪ್ರಕರಣಗಳು ಹೆಚ್ಚುತ್ತಿವೆ. ಕಾನೂನು ವ್ಯವಸ್ಥೆ ಕುಸಿಯುತ್ತಿದೆ. ಇದಕ್ಕೆ ಬಿಜೆಪಿಯನ್ನ ದೂಷಿಸಲು ವಿಫಲ ಪ್ರಯತ್ನ ಮಾಡಲಾಯಿತು. ನಮ್ಮ ಅವಿಶ್ವಾಸ ನಿರ್ಣಯದ ಪ್ರಸ್ತಾವದಲ್ಲಿ ಇವೆಲ್ಲಾ ವಿಚಾರಗಳನ್ನ ಪ್ರಸ್ತಾಪಿಸುತ್ತೇವೆ” ಎಂದರು.ಬಿಜೆಪಿಯ ರಾಜಸ್ಥಾನ ಘಟಕದ ಅಧ್ಯಕ್ಷ ಸತೀಶ್ ಪೂನಿಯಾ ಅವರೂ ನಾಳೆ ಬಿಜೆಪಿಯಿಂದ ಅವಿಶ್ವಾಸ ನಿರ್ಣಯ ಮಂಡಿಸುತ್ತಿರುವುದನ್ನು ಖಚಿತಪಡಿಸಿದರು.
ಅಶೋಕ್ ಗೆಹ್ಲೋಟ್ ಸರ್ಕಾರ ದ್ವಂದ್ವಗಳ ಸರ್ಕಾರವಾಗಿದೆ ಎಂದು ಟೀಕಿಸಿದ ಪೂನಿಯಾ, ರಾಜಸ್ಥಾನದ ಕಾಂಗ್ರೆಸ್ನೊಳಗಿನ ರಾಜಕೀಯ ಬಿಕ್ಕಟ್ಟು ಶಮನಗೊಂಡಂತೆ ತೋರುತ್ತಿದೆಯಾದರೂ ಆ ಪಕ್ಷದಲ್ಲಿ ಎಲ್ಲವೂ ಸರಿ ಇದೆ ಎಂಬಂತಿಲ್ಲ. ಹಗ್ಗ-ಜಗ್ಗಾಟ ನಡೆದಿದೆ. ಒಬ್ಬರು ಅತ್ತ ಎಳೆಯುತ್ತಿದ್ದರೆ, ಇನ್ನೊಬ್ಬರು ಇತ್ತ ಎಳೆಯುತ್ತಿದ್ದಾರೆ. ಶುಕ್ರವಾರ ಅವಿಶ್ವಾಸ ನಿರ್ಣಯ ಮಂಡಿಸುತ್ತೇವೆ ಎಂದರು.
ಇನ್ನು, ಬಿಜೆಪಿ ಶಾಸಕ ಮದನ್ ದಿಲಾವರ್ ಅವರು ಮಾತನಾಡಿ, ರಾಜಸ್ಥಾನ ಸರ್ಕಾರ ಕೋಮಾ ಸ್ಥಿತಿಯಲ್ಲಿದೆ. ಹೀಗಾಗಿ, ವಿರೋಧ ಪಕ್ಷದಿಂದ ಅವಿಶ್ವಾಸ ನಿರ್ಣಯ ಮಂಡಿಸಬೇಕಾಗಿದೆ ಎಂದು ಸ್ಪಷ್ಟಪಡಿಸಿದರು.