ನವದೆಹಲಿ: ಚಿನ್ನ ಹಾಗೂ ಬೆಳ್ಳಿ ಬೆಲೆಯಲ್ಲಿ ಬುಧವಾರ ಭಾರಿ ಇಳಿಕೆ ಕಂಡುಬಂದಿದೆ. ದೆಹಲಿಯಲ್ಲಿ ಮಂಗಳವಾರ ಪ್ರತಿ 10 ಗ್ರಾಂಗೆ 54174 ರೂ. ಇದ್ದ ಚಿನ್ನದ ಬೆಲೆ 1228 ರೂ. ಕಡಿಮೆಯಾಗಿದ್ದು, 52, 946 ರೂ.ಗೆ ಕುಸಿದಿದೆ. ಬೆಳ್ಳಿ ಬೆಲೆ ಪ್ರತಿ ಕೆಜಿಗೆ 5,174 ರೂ. ಇಳಿಕೆಯಾಗಿದ್ದು, 72,756 ರೂ. ನಿಂದ 67,584 ರೂ.ಗೆ ಕುಸಿದಿದೆ. ಜಾಗತಿಕ ಮಾರುಕಟ್ಟೆಯಲ್ಲೂ ಬೆಲೆ ಕುಸಿದಿದ್ದರಿಂದ ದೇಶೀಯ ಮಾರುಕಟ್ಟೆಯಲ್ಲಿ ದರ ಇಳಿಕೆಯಾಗಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಕಳೆದ ಕೆಲ ತಿಂಗಳಿಂದ ಸತತ ಏರಿಕೆ ದಾಖಲಿಸುತ್ತಿದ್ದ ಚಿನ್ನ, ಸಾವಿರಕ್ಕೂ ಅಧಿಕ ರೂಪಾಯಿ ಇಳಿಕೆ ಆಗಿರುವುದು ಆಭರಣ ಪ್ರಿಯರಿಗೆ ಸಂತಸ ತಂದಿದೆ.
ಇಳಿಕೆ ಯಾಕೆ?: ಕರೊನಾ ಹಿನ್ನೆಲೆಯಲ್ಲಿ ಇಳಿಕೆಯಾಗಿದ್ದ ಷೇರು ಮಾರುಕಟ್ಟೆ ಈಗ ಚೇತರಿಕೆ ಕಾಣುತ್ತಿದೆ. ಅಮೆರಿಕ ಷೇರು ಸೂಚ್ಯಂಕ ಎಸ್ಆಂಡ್ಪಿ 500 ದಾಖಲೆಯ ಏರಿಕೆ ಕಂಡಿದೆ. ಈ ಹಿನ್ನೆಲೆಯಲ್ಲಿ ದೊಡ್ಡ ಹೂಡಿಕೆದಾರರು ಚಿನ್ನದ ಬದಲು ಷೇರು ಮಾರುಕಟ್ಟೆಯಲ್ಲಿ ಹಣ ಹೂಡಿಕೆ ಮಾಡುತ್ತಿದ್ದಾರೆ. ಚಿನ್ನಕ್ಕೆ ಬೇಡಿಕೆ ಕಡಿಮೆಯಾದ ಹಿನ್ನೆಲೆಯಲ್ಲಿ ಕುಸಿತ ಕಂಡಿದೆ ಎಂದು ವಿಶ್ಲೇಷಕರು ತಿಳಿಸಿದ್ದಾರೆ. ಕರೊನಾ ಕಡಿಮೆಯಾಗಿ ಆರ್ಥಿಕತೆ ಸಹಜ ಸ್ಥಿತಿಗೆ ಮರಳುತ್ತದೆ ಎಂಬ ಆಶಾಭಾವದಿಂದ ಜನ ಚಿನ್ನದ ಬದಲು ಇತರ ಆಸ್ತಿಗಳ ಮೇಲೆ ಹೂಡಿಕೆಗೆ ಮುಂದಾಗಿದ್ದಾರೆ. ಕರೊನಾದಿಂದ ಜಾಗತಿಕ ಷೇರು ಮಾರುಕಟ್ಟೆ ಕುಸಿತ ಕಂಡಿದ್ದ ಹಿನ್ನೆಲೆಯಲ್ಲಿ ದೊಡ್ಡ ಹೂಡಿಕೆದಾರರು ಚಿನ್ನದ ಮೇಲೆ ಭಾರಿ ಹೂಡಿಕೆ ಮಾಡಿದ್ದರು. ಇದರಿಂದ ಬೆಲೆ ದಾಖಲೆಯ ಏರಿಕೆ ಕಂಡಿತ್ತು. ರೂಪಾಯಿ ಎದುರು ಡಾಲರ್ ತುಸು ದುರ್ಬಲಗೊಂಡಿರುವುದೂ ಚಿನ್ನ ಬೆಲೆ ಇಳಿಕೆಗೆ ಕಾರಣ ಎನ್ನಲಾಗಿದೆ.