ಪ್ರತಿವರ್ಷ ಜನವರಿ 4ರಂದು ವಿಶ್ವ ಬ್ರೈಲ್ ದಿನವನ್ನಾಗಿ ಆಚರಿಸಲಾಗುತ್ತದೆ. ಲೂಯಿ ಬ್ರೈಲ ಎಂಬಾತನು ಅತ್ಯುಪಯುಕ್ತ ಬ್ರೈಲ್ ಲಿಪಿಯನ್ನು ನಿರ್ಮಿಸಿ ದೃಷ್ಟಿಹೀನರ ಪಾಲಿಗೆ ದಾರಿದೀಪವಾಗಿದ್ದಾರೆಂದರೆ ಅತಿಶಯೋಕ್ತಿಯಾಗಲಾರದು. ವಿಶ್ವ ಬ್ರೈಲ್ ದಿನಾಚರಣೆಯ ಮೂಲ ಉದ್ದೇಶವೇನೆಂದರೆ ಜಾಗತಿಕವಾಗಿ ಬ್ರೈಲ್ ಲಿಪಿಯ ಬಳಕೆ ಮತ್ತು ದೃಷ್ಟಿಹೀನರು ಅದನ್ನು ಬಳಸಿಕೊಂಡು ಸ್ವತಂತ್ರವಾಗಿ ಜೀವನ ನಿರ್ವಹಿಸಲು ಅನುಕೂಲ ಮಾಡಿಕೊಡುವುದಾಗಿದೆ.
ಲೂಯಿ ಬ್ರೈಲ್ ತನ್ನ ಲಿಪಿಯನ್ನು ಲೋಕಾರ್ಪಣೆ ಮಾಡಿ 1852ರಲ್ಲಿ ಪ್ರಾಣಾರ್ಪಣೆ ಮಾಡಿದರು. ಅವರು ಮರಣಹೊಂದಿದ ಎರಡು ವರ್ಷಗಳ ತರುವಾಯ ಅವರು ವಿದ್ಯಾಭ್ಯಾಸ ಮಾಡಿದ್ದ ಫ್ರಾನ್ಸ್ ದೇಶದ ರಾಯಲ್ ಇನ್ಸ್ಟಿಟ್ಯೂಟ್ ಫಾರ್ ಬ್ಲೈಂಡ್ ಯೂತ್ ಎಂಬ ವಿದ್ಯಾಸಂಸ್ಥೆಯಲ್ಲಿ ಮೊಟ್ಟಮೊದಲ ಬಾರಿಗೆ ಬ್ರೈಲ್ ಲಿಪಿಯನ್ನು ಕಲಿಸಲಾರಂಭಿಸಲಾಯಿತು. ಇದೀಗ ವಿಶ್ವದ ಹಲವಾರು ಭಾಷೆಗಳಿಗೆ ಬ್ರೈಲ್ ಲಿಪಿಯನ್ನು ಕಂಡುಹಿಡಿಯಲಾಗಿದ್ದು ದೃಷ್ಟಿಹೀನರಿಗೆ ಬಹಳವಾಗಿ ಉಪಯೋಗವಾಗುತ್ತಿದೆ. ಹೋಟೆಲ್, ರೆಸ್ಟಾರಂಟ್, ರೈಲ್ ಟಿಕೆಟ್, ಬಸ್ ಟಿಕೆಟ್ ಹೀಗೆ ಹಲವಾರು ಕಡೆ ಬ್ರೈಲ್ ಲಿಪಿಯನ್ನು ಬಳಸಲಾಗುತ್ತಿದ್ದು, ಅನೇಕ ದೇಶಗಳಲ್ಲಿ ಎಲ್ಲ ಮುದ್ರಿತ ಪೊಟ್ಟಣಗಳ ಮೇಲೆ ನಮೂದಿಸಲಾಗುವ ವಿಷಯಗಳನ್ನು ಬ್ರೈಲ್ ಲಿಪಿಯಲ್ಲೂ ಮುದ್ರಿಸಬೇಕೆಂದು ಕಡ್ಡಾಯಗೊಳಿಸಲಾಗಿದೆ.
ವಿಶ್ವ ಬ್ರೈಲ್‌ದಿನಾಚರಣೆಯು ಬ್ರೈಲ್ ಲಿಪಿಯನ್ನು ಜಾಗತೀಕರಣಗೊಳಿಸುವಲ್ಲಿ ಒಂದು ಉತ್ತಮ ವ್ಯವಸ್ಥೆಯಾಗಿದೆ. ಬ್ರೈಲ್ ಲಿಪಿಯ ಬಳಕೆಯಿಂದ ದೃಷ್ಟಿಹೀನರು ಸಮಾಜದಲ್ಲಿ ಯಾರ ಸಹಾಯವಿಲ್ಲದೆ ಸ್ವತಂತ್ರವಾಗಿ ಬದುಕನ್ನು ಸಾಗಿಸಬಹುದಾಗಿದೆ.