ಕಳೆದ ಮೂರು ವಾರಗಳಲ್ಲಿ ಹಿಂದೂ ಸಂಘಟನೆಗಳ ಪ್ರಚಾರದಿಂದ ಮತ್ತೊಂದು ಗುಂಪಿನ ಜನರು ಆಕ್ರೋಶಗೊಂಡಿದ್ದಾರೆ. ಹಾಸನ ಜಿಲ್ಲೆಯಲ್ಲಿ ಹಿಂದೂ ವ್ಯಾಪಾರಿಗಳಿಗೆ ಸಾಮಾನ್ಯ ಮಾರುಕಟ್ಟೆಯಲ್ಲಿ ವ್ಯಾಪಾರ ಮಾಡಲು ಅವಕಾಶ ಕಲ್ಪಿಸುವ ಸಾಮಾಜಿಕ ಮಾಧ್ಯಮ ಅಭಿಯಾನವನ್ನು ಪ್ರಾರಂಭಿಸಲಾಗಿದೆ. ಹೀಗಾಗಿ ಏಷ್ಯಾದಲ್ಲೇ ಅತಿ ದೊಡ್ಡ ಮಾವು ಮಾರುಕಟ್ಟೆ ಹೊಂದಿರುವ ಶ್ರೀನಿವಾಸಪುರದಲ್ಲಿ ಮಾವಿನ ಭಯ ಕಾಡುತ್ತಿದೆ.
ಶ್ರೀನಿವಾಸಪುರ ತಾಲೂಕಿನಲ್ಲಿ ದೇಶದಲ್ಲಿ ಅತೀ ಹೆಚ್ಚು ಮಾವು ಬೆಳೆಯಲಾಗುತ್ತದೆ, 55 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಮಾವು ಬೆಳೆಯಲಾಗುತ್ತದೆ. ಇಲ್ಲಿಯ ಮಾರುಕಟ್ಟೆಯಲ್ಲಿ ವರ್ಷವೊಂದಕ್ಕೆ 5 ಲಕ್ಷ ಟನ್ ಮಾವು ವಹಿವಾಟು ನಡೆಯುತಿದ್ದು, 200 ಕೋಟಿಗಿಂತಲೂ ಹೆಚ್ಚು ಹಣದ ಮಾವು ವ್ಯಾಪಾರ ನಡೆಯುತ್ತದೆ.
ಇದೀಗ ಮಾವು ಬೆಳೆದ ರೈತರು ಕೇವಲ ಹಿಂದೂ ವ್ಯಾಪಾರಿಗಳ ಬಳಿ ಮಾತ್ರ ಮಾರಾಟ ಮಾಡಿ, ಮುಸ್ಲಿಂ ವ್ಯಾಪಾರಿ ಬಳಿ ಹೋಗಬೇಡಿ ಎನ್ನುವ ಸಾಮಾಜಿಕ ಜಾಲತಾಣದ ಸಂದೇಶವೊಂದು ಹರಿದಾಡುತ್ತಿದೆ. ಆದರೆ ಈ ವಿವಾದ ಇನ್ನೂ ಕೋಲಾರ ಜಿಲ್ಲೆಗೆ ಕಾಲಿಟ್ಟಿಲ್ಲ, ಆದರೂ ಜಿಲ್ಲೆಯ ಮಾವು ವ್ಯಾಪಾರಿ, ಬೆಳೆಗಾರ, ಮತ್ತು ಸಾರ್ವಜನಿಕರಲ್ಲಿ ಚರ್ಚೆ ಆರಂಭವಾಗಿದ್ದು ಮಿಶ್ರ ಪ್ರತಿಕ್ರಿಯೆಗಳು ವ್ಯಕ್ತವಾಗಿದೆ.
ವ್ಯಾಪಾರಿಗಳು ಹೇಳೋದೇನು?
ಶ್ರೀನಿವಾಸಪುರ ಮಾರುಕಟ್ಟೆಯಲ್ಲಿ ಮುಸ್ಲಿಂ ವ್ಯಾಪಾರಿಗಳು ಹಲವಾರು ವರ್ಷಗಳಿಂದ ವಹಿವಾಟು ನಡೆಸುತ್ತಿದ್ದಾರ., ಇಲ್ಲಿ ತಾರತಮ್ಯ ಎಂಬುದಿಲ್ಲ, ರೈತರು ಮತ್ತು ವ್ಯಾಪಾರಿಗಳು ಅನ್ಯೋನ್ಯವಾಗಿದ್ದು, ಇದನ್ನು ಕೆಡಿಸಬೇಡಿ ಎಂದು ವ್ಯಾಪಾರಿಗಳು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಮಾವಿನ ಮಾರುಕಟ್ಟೆಯಲ್ಲಿ ಒಟ್ಟು ೧೨೦ ಮಂಡಿಗಳಿದ್ದು, ಇದರಲ್ಲಿ ೮೦ ಜನ ಮುಸ್ಲಿಮರು , ಉಳಿದ ೪೦ ಮಂದಿ
ಹಿಂದೂ ವ್ಯಾಪಾರಿಗಳಾಗಿರುತ್ತಾರೆ . ಮಾವು ಸುಗ್ಗಿ ವೇಳೆ ಮಾವುಗಳನ್ನ ಕಟಾವು ಮಾಡಿ,
ರೈತರು ಇಲ್ಲಿಗೆ ತಂದಾಕ್ಷಣ , ವ್ಯಾಪಾರಿಗಳು ದಲ್ಲಾಳಿಗಳ ಮುಂದೆ ಮಾರಾಟ ಮಾಡಿ, ಕಮಿಷನ್ ಹಣ ತೆಗೆದುಕೊಳ್ಳುತ್ತಾರೆ.
ನಂತರ ದೇಶದ ನಾನಾ ರಾಜ್ಯಗಳಿಗೆ ಮಾವು ರವಾನೆ ಮಾಡುತಿದ್ದಾರೆ. ಇದರಲ್ಲಿ ಮುಖ್ಯವಾಗಿ ಕೋಲ್ಕತ್ತಾ, ಮಹಾರಾಷ್ಟ್ರ, ಗೋವಾ , ಗುಜರಾತ್ , ಉತ್ತರ ಪ್ರದೇಶ , ದೆಹಲಿ , ಜಮ್ಮು ಕಾಶ್ಮೀರಕ್ಕೂ ಈ ಮಾವನ್ನು ರವಾನೆ ಮಾಡುತ್ತಾರೆ.
ಶ್ರೀನಿವಾಸಪುರ ಮಾವಿಗೆ ಹೆಚ್ಚು ಬೇಡಿಕೆ
ಶ್ರೀನಿವಾಸಪುರ ಮಾವಿಗೆ ದೇಶದೆಲ್ಲೆಡೆ ಎಲ್ಲಿಲ್ಲದ ಬೇಡಿಕೆಯಿದ್ದು, ತೋತಾಪುರಿ, ರಸಗುಲ್ಲ, ಬೇನಿಶಾ, ನೀಲಂ, ಮಲ್ಲಿಕಾ, ಮಲಗುವಾ ಮಾವಿಗೆ ಹೆಚ್ಚಿನ ಬೇಡಿಕೆಯಿದೆ.
ಇನ್ನು ಶ್ರೀನಿವಾಸಪುರ ಮಾರುಕಟ್ಟೆಯಲ್ಲಿ ಮುಸ್ಲಿಂ ವ್ಯಾಪಾರಿಗಳು ಹೆಚ್ಚಿರಲು ಕಾರಣಗಳೇನು ಎನ್ನುವುದನ್ನ ನೋಡುವುದಾದರೆ, ದೇಶದ ವಿವಿಧ ರಾಜ್ಯಗಳಲ್ಲಿ ಹಣ್ಣು ವ್ಯಾಪಾರದಲ್ಲಿ ಮುಸ್ಲಿಂ ದಲ್ಲಾಳಿಗಳೇ ಹೆಚ್ಚು. ಹೀಗಾಗಿ ದಲ್ಲಾಳಿಗಳ ಸುಲಭ ಸಂಪರ್ಕ ವ್ಯಾಪಾರಿಗಳು ಹೊಂದಿದ್ದಾರೆ.
ಮಾವು ಮಾರುಕಟ್ಟೆಯಲ್ಲಿ ವ್ಯಾಪಾರಿಗಳೇ ನೇರವಾಗಿ ಕೊಳ್ಳುವ ಕಾರಣ, ಸ್ಥಳದ್ಲೇ ಹಣದ ವಹಿವಾಟು ನಡೆಯುತ್ತಿದೆ, ಮ್ಯಾಂಗೊ ಮಾರುಕಟ್ಟೆ ವಿವಾದದ ಬಗ್ಗೆ ಮಾತನಾಡಿರೊ ಮುಸ್ಲಿಂ ವ್ಯಾಪಾರಿಗಳು, ವ್ಯಾಪಾರದಲ್ಲಿ ಧರ್ಮ ಮುಖ್ಯವಲ್ಲ. ಉತ್ತಮ ಒಡನಾಟ, ಹಣಕಾಸಿನ ವ್ಯಾಪಾರ ಮುಖ್ಯ. ಲಾಭ ನಷ್ಟದಲ್ಲೂ ರೈತರಿಗೆ ನಾವು ಹಣ ನೀಡಿದ್ದೇವೆ ಎನ್ನುತ್ತಾರೆ.
ಇನ್ನು ಈ ಬಗ್ಗೆ ಮಾತನಾಡಿರುವ ಮಾವು ಬೆಳೆಗಾರರು, ಹಿಂದೂ ವ್ಯಾಪಾರಿಗಳು ಮಾರಾಟ ಕೇಂದ್ರ ತೆರೆಯಲಿ, ಆದರೆ ನಮಗೆ ಯಾವ ಧರ್ಮ ಬೇದಬಾವ ಇಲ್ಲ ಎಂದಿದ್ದಾರೆ, ಇನ್ನು ಹಿಂದೂಪರ ಸಂಘಟನೆಯವರು ಕೇವಲ ಪೋಸ್ಟ್ ಹಾಕೋದು ಬಿಟ್ಟು, ಸ್ಥಳಕ್ಕೆ ಬಂದು ಕೆಲಸ ಮಾಡಲಿ ಎಂದು ರೈತರಿಗೆ ಸವಾಲು ಹಾಕಿದ್ದಾರೆ.
ಒಟ್ಟಿನಲ್ಲಿ ಮಾವು ಮಾರುಕಟ್ಟೆ ಆರಂಭಕ್ಕೆ ಇನ್ನೂ ಒಂದು ತಿಂಗಳಿದ್ದು ವಿವಾದ ಅಲ್ಲಿಯವರೆಗೆ ಮುಂದುವರೆವ ಸಾಧ್ಯತೆಯಿದೆ, ವಿವಾದದ ಕಹಿ ಮರೆಯಾಗಿ ಮಾವಿನ ಸಿಹಿ ಮಾತ್ರ ಇಲ್ಲಿಂದ ಹೊರಬೀಳಲಿ ಎಂಬುದು ಶ್ರೀನಿವಾಸಪುರ ಮಾವು ಬೆಳೆಗಾರರು ಹಾಗು ಮಂಡಿ ಮಾಲೀಕರ ಆಗ್ರಹ.