ದಾವಣಗೆರೆ: ದಾವಣಗೆರೆಯ ನಿವಾಸಿ ಮಕ್ಬುಲ್‌ಸಾಬ್ ಅವರ ಮಗಳು ಫೈರೋಜಾ ಬಾನು ಭಾರತಕ್ಕೆ ವಾಪಸ್ಸಾದವರು. ಅವರು ಶನಿವಾರ ಮುಂಜಾನೆ ಬೆಂಗಳೂರು ಕೆಂಪೇಗೌಡ ವಿಮಾನ ನಿಲ್ದಾಣಕ್ಕೆ ಬಂದಿಳಿದರು.
ದಂಪತಿಗಳಾದ ಮಕ್ಬುಲ್ ಸಾಬ್ ಜುಬೇದಾಬಿಗೆ ಏಳು ಹೆಣ್ಣು ಮತ್ತು ಇಬ್ಬರು ಗಂಡುಮಕ್ಕಳು. ಮೊದಲ ಮಗಳಾದ ಫೈರೋಜಾ ಬಾನುಗೆ 14 ವರ್ಷಗಳ ಹಿಂದೆ ಮದುವೆಯಾಗಿತ್ತು.
ಮೂರು ಮಕ್ಕಳಾದ ಮೇಲೆ ಗಂಡನೂ ಬಿಟ್ಟುಹೋಗಿದ್ದ. ಹೊಟ್ಟೆಪಾಡಿಗಾಗಿ ಎರಡು ವರ್ಷಗಳ ಹಿಂದೆ ಸೌದಿ ಅರೇಬಿಯಾಕ್ಕೆ ಫೈರೋಜಾ ಬಾನು ಹೋಗಿದ್ದರು. ಬಳಿಕ ತಾಯಿ ಮೃತಪಟ್ಟಾಗ ನೋಡಲು ಕೂಡ ಕಳುಹಿಸಿಕೊಟ್ಟಿರಲಿಲ್ಲ. ವೇತನವನ್ನೂ ನೀಡಿರಲಿಲ್ಲ. ಅವರನ್ನು ಹೇಗಾದರೂ ಭಾರತಕ್ಕೆ ಕರೆಸಿ ಎಂದು ಆಕೆಯ ಸಹೋದರಿ ನಸ್ರೀನ್‌ಬಾನು ಸರ್ಕಾರಕ್ಕೆ ಮನವಿ ಮಾಡಿದ್ದರೂ ಪ್ರಯೋಜನವಾಗಿರಲಿಲ್ಲ.
ಸೌದಿ ರಾಜಧಾನಿ ರಿಯಾದ್‌ನಿಂದ ಸುಮಾರು ಸಾವಿರ ಕಿಲೋಮೀಟರ್ ದೂರ ಇರುವ ಸಕಾಕಹ್‌ನಲ್ಲಿ ಫೈರೋಜಾ ಬಾನು ಇರುವುದು ಪತ್ತೆಯಾಗಿತ್ತು. ಸಕಾಕಹ್‌ನಲ್ಲಿ ಇರುವ ಕೇರಳದ ಸಲಿಂ ಎಂಬವರ ನೆರವು ಪಡೆದುಕೊಂಡು ಅಲ್ಲಿರುವ ಭಾರತದ ರಾಯಭಾರಿ ಕಚೇರಿಗೆ ಮಾಹಿತಿ ನೀಡಿದ್ದರು. ಭಾರತದ ವಿದೇಶಾಂಗ ಸಚಿವಾಲಯದ ಗಮನಕ್ಕೂ ತಂದಿದ್ದರು. ಜತೆಗೆ ಅಲ್ಲಿ ಹ್ಯೂಮನ್ ರೈಟ್ಸ್ ಕಮಿಷನ್‌ನ ಗಮನಕ್ಕೆ ತರಲಾಗಿತ್ತು.
ಈ ಎಲ್ಲರ ಪ್ರಯತ್ನದ ಫಲವಾಗಿ ಫೈರೋಜ್ ಬಾನು ಅವರ ಕಫೀಲ್ (ಪ್ರಾಯೋಜಕ) ಭಾರತಕ್ಕೆ ಕಳುಹಿಸಿಕೊಡಲು ಒಪ್ಪಿದ್ದಾನೆ. ಅದರಂತೆ ಶುಕ್ರವಾರ ಸಕಾಕಹ್‌ನಿಂದ ಕತಾರ್‌ಗೆ ಬಂದು, ಅಲ್ಲಿಂದ ಬೆಂಗಳೂರಿಗೆ ಬಂದಿದ್ದಾರೆ.
ಸೌದಿ ಅರೇಬಿಯಾಕ್ಕೆ ಹೋಗಿದ್ದ ಅಕ್ಕ ಬೆಂಗಳೂರು ವಿಮಾನ ನಿಲ್ದಾಣಕ್ಕೆ ಬಂದಿದ್ದಾರೆ. ಅವರನ್ನು ಕರೆದುಕೊಂಡು ಬರಲು ಮನೆಯವರು ಹೋಗಿದ್ದಾರೆ ಎಂದು ಫೈರೊಜಾಬಾನಿ ಅವರ ಸಹೋದರಿ ನಸ್ರೀನ್ ಬಾನು ತಿಳಿಸಿದ್ದಾರೆ.