ಬೇಸಿಗೆ (Summer) ಹಿನ್ನೆಲೆ ಜನರು ಫ್ಯಾನ್, ರೆಫ್ರಿಜಿರೇಟರ್( Refrigerator) , ಕೂಲರ್ ( Cooler ), ಎಸಿಗಳ ಮೊರೆ ಹೋಗವುದು ಹೆಚ್ಚು, ನಿಮ್ಮ ವಿದ್ಯುನ್ಮಾನ ಯಂತ್ರಗಳ ನಿರ್ವಹಣೆಯ ಬಗ್ಗೆ ಎಚ್ಚರಿಕೆ ತೆಗೆದುಕೊಳ್ಳಬೇಕು. ಇಲ್ಲವಾದ್ರೆ ದೊಡ್ಡ ಅನಾಹುತಗಳೇ ಸಂಭವಿಸುತ್ತವೆ. ಇದೀಗ ಇದೇ ರೀತಿಯ ಘಟನೆ ನಡೆದಿದೆ.
ವಿಜಯನಗರ: ಎಸಿ ಸ್ಫೋಟಗೊಂಡು ಇಬ್ಬರು ಮಕ್ಕಳ ಸಹಿತ ದಂಪತಿ ಸಜೀವ ದಹನವಾಗಿರುವ ಘಟನೆ ವಿಜಯನಗರ ಜಿಲ್ಲೆಯ ಹೊಸಪೇಟೆ ತಾಲ್ಲೂಕಿನ ಮರಿಯಮ್ಮನಹಳ್ಳಿಯಲ್ಲಿ ಕಳೆದ ತಡರಾತ್ರಿ ಸಂಭವಿಸಿದೆ.
ಮೃತ ದಂಪತಿಯನ್ನು 42 ವರ್ಷದ ವೆಂಕಟ್ ಪ್ರಶಾಂತ್, 38 ವರ್ಷದ ಡಿ ಚಂದ್ರಕಲಾ, ಮಕ್ಕಳಾದ 16 ವರ್ಷದ ಎಚ್ ಎ ಅರ್ದ್ವಿಕ್ ಮತ್ತು 8 ವರ್ಷದ ಬಾಲಕಿ ಪ್ರೇರಣ ಎಂದು ಗುರುತಿಸಲಾಗಿದೆ.
ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದ ಎಸಿಯಲ್ಲಿ ಸೋರಿಕೆಯೊಗಿ ಈ ಘೋರ ಸ್ಫೋಟ ಸಂಭವಿಸಿದೆ. ತಡರಾತ್ರಿ ಹೊತ್ತು ನಿದ್ದೆ ಮಾಡುತ್ತಿದ್ದ ವೇಳೆ ಎಸಿ ಸ್ಫೋಟಗೊಂಡು ಬೆಂಕಿ ಧಗಧಗನೆ ಹೊತ್ತಿ ಉರಿದು ಇಡೀ ಮನೆ ಆವರಿಸಿದ್ದರಿಂದ ದಂಪತಿ ಮತ್ತು ಮಕ್ಕಳು ಹೊರಬರಲಾಗದೆ ಸಜೀವ ದಹನಗೊಂಡಿದ್ದಾರೆ ಎಂದು ತಿಳಿದುಬಂದಿದೆ.
ಮರಿಯಮ್ಮನಹಳ್ಳಿಯ ರಾಘವೇಂದ್ರ ಶೆಟ್ಟಿ ಎಂಬುವವರ ಮನೆಯಲ್ಲಿ ರಾತ್ರಿ ಹೊತ್ತು ಮಲಗಿದ್ದ ವೇಳೆ ಈ ದುರ್ಘಟನೆ ಸಂಭವಿಸಿದೆ. ಮರಿಯಮ್ಮನಹಳ್ಳಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಘಟನೆ ಬಗ್ಗೆ ಎಲ್ಲಾ ಕೋನಗಳಿಂದ ತನಿಖೆ ನಡೆಸಲಾಗುತ್ತಿದೆ. ಕುಟುಂಬದಲ್ಲಿ ಸ್ವಲ್ಪ ವೈಮನಸ್ಸು, ವಿವಾದಗಳಿದ್ದು ತೆಗೆದುಕೊಂಡ ಸಾಲ ಮರುಪಾವತಿ ಮಾಡಿರಲಿಲ್ಲ, ಆ ಬಗ್ಗೆ ಕೂಡ ತನಿಖೆ ನಡೆಸಲಾಗುತ್ತದೆ ಎಂದು ಪೊಲೀಸರು ತಿಳಿಸಿದ್ದಾರೆ.
ಸದ್ಯ ನಾಲ್ಕು ಮೃತದೇಹಗಳನ್ನು ಸಾರ್ವಜನಿಕ ಆಸ್ಪತ್ರೆಯಲ್ಲಿ ಇರಿಸಲಾಗಿದೆ. ಇಳಿ ವಯಸ್ಸಿನಲ್ಲಿ ಮಗ, ಸೊಸೆ ಹಾಗೂ ಮೊಮ್ಮಕ್ಕಳನ್ನು ಕಳೆದುಕೊಂಡ ರಾಘವೇಂದ್ರ ಶೆಟ್ಟಿ ಮತ್ತು ಕುಟುಂಬ ದಿಗ್ಬ್ರಮೆಯಲ್ಲಿದೆ.
*****