ನವದೆಹಲಿ: ಜಮ್ಮು ಮತ್ತು ಕಾಶ್ಮೀರದಲ್ಲಿರುವ ವೈಷ್ಣೋದೇವಿ ಪ್ರಸಾದ ಪಡೆಯಲು ಇನ್ನು ಮುಂದೆ ಅಲ್ಲಿಗೇ ಹೋಗಬೇಕೆಂದೇನು ಇಲ್ಲ. ನಿಮ್ಮ ಒಂದು ಕರೆ ಇಲ್ಲವೇ ವೆಬ್ ಸೈಟ್ ಮೇಲೆ ಒಂದು ಕ್ಲಿಕ್ ಮಾಡಿದರೆ ಸಾಕು ನಿಮ್ಮ ಮನೆಬಾಗಿಲಿಗೆ ಪ್ರಸಾದ ಬರುತ್ತದೆ. ಪ್ರಸಾದ ವಿತರಣೆಗೆ ಅಂಚೆ ಸೇವೆಯನ್ನು ಪ್ರಾರಂಭಿಸಲಾಗಿದೆ.
ತ್ರಿಕೂಟ ಪರ್ವತ ವಾಸಿ ಎಂದೇ ಹೆಸರಾಗಿರುವ ವೈಷ್ಣೋದೇವಿಗೆ ನಡೆದುಕೊಳ್ಳುವವರು ರಾಜ್ಯದಲ್ಲೂ ಇದ್ದಾರೆ. ಅಷ್ಟೇ ಏಕೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಂದ ಹಿಡಿದು ದೊಡ್ಡ ದೊಡ್ಡ ರಾಜಕಾರಣಿಗಳು ತಾಯಿಯ ದರ್ಶನಕ್ಕೆ ಅಲ್ಲಿಗೆ ಹೋಗಿ ಬರುತ್ತಾರೆ. ಆದರೆ, ಈಗ ಕೊರೋನಾದಿಂದ ಹೋಗಲು ಕಷ್ಟಪಡುವ ಪರಿಸ್ಥಿತಿ ಇದೆ. ಇದಕ್ಕೋಸ್ಕರವೇ ಆನ್ ಲೈನ್ ಮೂಲಕ ಪ್ರಸಾದ ವಿತರಣೆ ವ್ಯವಸ್ಥೆ ಮಾಡಲಾಗಿದೆ.
ಒಟ್ಟಾರೆ 3 ವಿಧದಲ್ಲಿ ಪ್ರಸಾದವನ್ನು ವಿತರಣೆ ಮಾಡಲಾಗುತ್ತದೆ. ದೇವಾಲಯದ ಅಧಿಕೃತ ವೆಬ್‌ಸೈಟ್ ಮೂಲಕ ತಮ್ಮ ಆಯ್ಕೆಯ ಪ್ರಸಾದವನ್ನು ತರಿಸಿಕೊಳ್ಳಬಹುದಾಗಿದೆ. ಅಲ್ಲದಿದ್ದರೆ 9906019475ಗೆ ಕರೆ ಮಾಡಿ ಮಾಹಿತಿ ನೀಡಿಯೂ ಪ್ರಸಾದವನ್ನು ತರಿಸಿಕೊಳ್ಳಬಹುದು ಎಂದು ಆಡಳಿತ ಮಂಡಳಿ ತಿಳಿಸಿದೆ.