ಬೆಂಗಳೂರು : ನಾನಾ ಬಗೆಯ ಕಸರತ್ತು ಮಾಡಿ ಪ್ರೀ ವೆಡ್ಡಿಂಗ್ ಮಾಡುವ ಈ ಕಾಲದಲ್ಲಿ ನಮ್ಮ ನೆಲದ ಸಂಸ್ಕೃತಿ ಬಿಂಬಿಸುವ ಪ್ರೀ ವೆಡ್ಡಿಂಗ್ ವಿಡಿಯೋ ಮಾಡಿದ ಜೋಡಿ ಈಗ ಸೋಷಿಯಲ್ ಮೀಡಿಯಾದಲ್ಲಿ ಸುದ್ದಿಯಾಗಿದೆ.
ಉತ್ತರಕನ್ನಡ ಹಾಗೂ ಶಿವಮೊಗ್ಗ ಮೂಲದ ಜೋಡಿಯೊಂದು ಯಕ್ಷಗಾನ ಹಾಗೂ ಭರತನಾಟ್ಯವನ್ನು ಬಿಂಬಿಸುವ ನೃತ್ಯರೂಪಕವನ್ನು ಪ್ರೀ ವೆಡ್ಡಿಂಗ್ ಶೂಟ್ ಮಾಡಿದ್ದು, ನೆಟ್ಟಿಗರು ಚಿಂತನೆಗೆ ಶಭಾಸ್ ಗಿರಿ ನೀಡಿದ್ದಾರೆ.
ಜೋಗ ಸಮೀಪದ ಕಾಳಮಂಜಿಯವರಾದ ಚಂದನ್ ಕಲಾಹಂಸ ಹಾಗೂ ಯಲ್ಲಾಪುರ ಸಮೀಪದ ಉಮ್ಮಚಗಿಯ ಭಾರ್ಗವಿ ಬಿ.ಎಚ್ ಈ ವಿಡಿಯೋದಲ್ಲಿ ಭಾಗಿಯಾಗಿದ್ದಾರೆ. ಬೆಂಗಳೂರು ತುಮಕೂರು ಮಾರ್ಗದಿಂದ ಸ್ವಲ್ಪ ಒಳಗಿರುವ ರಿತುಂಬರಾ ರಿಟ್ರೀಟ್ ಹಾಗೂ ಹೊರಮಾಂವು ಸಮೀಪದ ರಾಮಕೃಷ್ಣ ವೇದ ವಿಜ್ಞಾನ ಗುರುಕುಲದಲ್ಲಿ ಶೂಟಿಂಗ್ ನಡೆದಿದ್ದು ಮ್ಯಾಜಿಕಲ್ ಫ್ರೇಮ್ಸ್ ನ ಕ್ಯಾಮೆರಾಮನ್ ಗಣಪತಿ ಹೆಗಡೆ ತಮ್ಮ ಕೈಚಳಕ ಮೆರೆದಿದ್ದಾರೆ.
ವಿದುಷಿ. ಭಾರ್ಗವಿ ಅವರು ಭರತನಾಟ್ಯದಲ್ಲೇ ವಿದ್ವತ್ ಪೂರೈಸಿದ್ದು, ಮಾಸ್ಟರ್ ಆಫ್ ಪರ್ಫಾರ್ಮಿಂಗ್ ಆರ್ಟ್ಸ್ ಕೂಡ ಮುಗಿಸಿದ್ದಾರೆ. ಹಾಗೆಯೇ ಎಂ.ಕಾಂ. ಕೂಡಾ ಪೂರೈಸಿರುವ ಭಾರ್ಗವಿ ಖಾಸಗಿ ಕಂಪನಿಯೊಂದರಲ್ಲಿ ಸೀನಿಯರ್ ಎಕ್ಸಿಕ್ಯುಟಿವ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
ಅಂತೆಯೇ ಬಿ.ಕಾಂ, ಎಂ.ಎ ಪದವೀಧರರಾದ ಚಂದನ್ ಕಲಾಹಂಸ ಬೆಂಗಳೂರಿನ ವಿಜಯನಗರದಲ್ಲಿ ಕಲಾಹಂಸ ಇನ್ಫೋಟೆಕ್ ಪ್ರೈವೇಟ್ ಲಿಮಿಟೆಡ್ ಎಂಬ ವೆಬ್ ಡಿಸೈನ್ ಹಾಗೂ ಡಿಜಿಟಲ್ ಮಾರ್ಕೆಟಿಂಗ್ ಸಂಸ್ಥೆ ನಡೆಸುತ್ತಿದ್ದಾರೆ. ಎಳವೆಯಲ್ಲಿ ಯಕ್ಷಗಾನ ಕಲಿತಿದ್ದ ಇವರು ತಮ್ಮ ಆಸಕ್ತಿಗಾಗಿ ಈ ವಿಡಿಯೋ ಮಾಡಿದ್ದಾಗಿ ಪೋಸ್ಟ್ನಲ್ಲಿ ಹಂಚಿಕೊಂಡಿದ್ದಾರೆ.
ಒಟ್ಟಿನಲ್ಲಿ ನ.14 ರಂದು ಶಿರಸಿ ಸಮೀಪದ ಕೊಳಗಿಬೀಸ್ ನಲ್ಲಿ ಹಸೆಮಣೆ ಏರಲಿರುವ ನವಜೋಡಿಗೆ ನೆಟ್ಟಿಗರು ಶುಭಾಶಯಗಳ ಮಹಾಪೂರವನ್ನೇ ಹರಿಸಿದ್ದಾರೆ.