ನವದೆಹಲಿ, ಆ.೧೬ : ಆಹಾರ ಕೊರತೆಯಿಂದ ಉಂಟಾಗುವ ನ್ಯೂನತೆಗಳನ್ನು ಸರಿಪಡಿಸುವ ಸಲುವಾಗಿ ಹೆಣ್ಣು ಮಕ್ಕಳ ಮದುವೆ ವಯಸ್ಸನ್ನು ಕಾನೂನು ರೀತ್ಯ ಬದಲಾವಣೆ ಮಾಡುವ ಉದ್ದೇಶವನ್ನು ಕೇಂದ್ರ ಹೊಂದಿದೆ.
ಪ್ರಧಾನಿ ನರೇಂದ್ರ ಮೋದಿ ಅವರು ಈ ಕುರಿತು ಇಂಗಿತ ವ್ಯಕ್ತಪಡಿಸಿದ್ದು, ಸದ್ಯದಲ್ಲಿಯೇ ಹೆಣ್ಣು ಮಕ್ಕಳ ಮದುವೆ ವಯಸ್ಸು ಬದಲಾಯಿಸುವ ಕುರಿತು ಪರಿಷ್ಕರಣೆ ಮಾಡಲು ಸಮಿತಿಯೊಂದನ್ನು ರಚಿಸಲಾಗುತ್ತಿದೆ ಎಂದವರು ನಿನ್ನೆ ಬದಲಾವಣೆ ಪ್ರಸ್ತಾವದ ಸೂಚನೆ ನೀಡಿದ್ದಾರೆ.
‘ಹೆಣ್ಣು ಮಕ್ಕಳಿಗೆ ಮದುವೆ ವಯಸ್ಸು ಕಾನೂನು ರೀತಿಯಲ್ಲಿ ಎಷ್ಟಿರಬೇಕು’ ಎಂಬುದನ್ನು ಸಮಿತಿ ಪರಿಷ್ಕರಿಸುತ್ತದೆ. ಸದ್ಯ ಹೆಣ್ಣು ಮಕ್ಕಳಿಗೆ ಮದುವೆ ವಯಸ್ಸು ೧೮ ಆಗಿದ್ದು, ಆಹಾರ ಕೊರತೆಯ ದುಷ್ಪರಿಣಾಮ ಹೆಣ್ಣು ಮಕ್ಕಳ ಮೇಲೆ ಉಂಟು ಮಾಡುವ ಪರಿಣಾಮಗಳನ್ನು ಅಧ್ಯಯನ ಕೈಗೊಂಡು ಸಮಿತಿ ವರದಿ ನೀಡುತ್ತದೆ ಎಂದು ಪ್ರಧಾನಿ ಅವರು ಸೂಚ್ಯವಾಗಿ ನೀಡಿರುವ ಮಾಹಿತಿಗಳನ್ನು ಆಧರಿಸಿ ಸುದ್ದಿ ಸಂಸ್ಥೆ ವರದಿ ಮಾಡಿದೆ.
ಹೆಣ್ಣು ಮಕ್ಕಳು ತಾಯಿಯಾಗಲು ಸರಿಯಾದ ವಯಸ್ಸು ಯಾವುದು ಎಂಬುದನ್ನು ಗಮನದಲ್ಲಿ ಇರಿಸಿಕೊಂಡು ಈ ಚಿಂತನೆ ನಡೆಸಲಾಗಿದೆ. ಕಳೆದ ಜೂನ್‌ನಲ್ಲಿ ಸಾಮಾಜಿಕ ಕಾರ್ಯಕರ್ತೆ ಜಯಾ ಜೈಟ್ಲಿ ಅವರ ನೇತೃತ್ವದಲ್ಲಿ ರಚಿಸಲಾದ ಕಾರ್ಯಪಡೆ ಗಮನ ಹರಿಸಿ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರಿಗೆ ವರದಿ ನೀಡಲಿದೆ. ನಿಮಲ ಸೀತಾರಾಮನ್ ಮುಂದಿನ ಬಜೆಟ್‌ನಲ್ಲಿ ಈ ಕುರಿತು ಘೋಷಣೆ ಮಾಡುವ ಸಾಧ್ಯತೆ ಇದೆ.
೧೯೭೮ರಲ್ಲಿ ಹೆಣ್ಣು ಮಕ್ಕಳ ಮದುವೆ ವಯಸ್ಸನ್ನು ೧೫ ರಿಂದ ೧೮ಕ್ಕೆ ಹೆಚ್ಚಿಸಲಾಗಿತ್ತು. ಮುಂದುವರೆದ ಭಾರತದಲ್ಲಿ ವಿದ್ಯಾವಂತ ಹೆಣ್ಣು ಮಕ್ಕಳ ಉನ್ನತ ಶಿಕ್ಷಣ ಹಾಗೂ ಇತರ ವಿಷಯಗಳನ್ನು ಗಮನದಲ್ಲಿ ಇರಿಸಿಕೊಂಡು ಈ ಬದಲಾವಣೆ ಮಾಡಲಾಗುತ್ತದೆ. ಅದೇ ರೀತಿ ಪೌಷ್ಟಿಕತೆ ಮತ್ತು ತಾಯ್ತನದ ವಿಷಯಗಳು ಇಲ್ಲಿ ವಿಮರ್ಶೆಗೆ ಬರುತ್ತವೆ ಎಂಬ ಅಭಿಪ್ರಾಯ ಕೂಡ ವ್ಯಕ್ತವಾಗಿದೆ ಎಂದು ಸುದ್ದಿ ಸಂಸ್ಥೆ ಅದರಲ್ಲಿ ತಿಳಿಸಿದೆ.