ನವಸಂಸ್ಕೃತಿ, ಸಂಸ್ಕಾರ, ಸಾಮರಸ್ಯ, ಎಲ್ಲವುದರ ಏಕರೂಪಿ ಭಾವವನ್ನು ರೂಪವಾಗಿ ಕಣ್ಣೆದುರು ತಂದುಕೊಳ್ಳುವುದಾದರೆ ಅದರ ಸಾರಸಮಗ್ರವೇ ‘ಭಾರತ’ವೆನ್ನುವ ಅಮೃತಗಣಿ. ಅಡಿಯಿಟ್ಟೆಲ್ಲೆಲ್ಲಾ ಪುಣ್ಯಪುರುಷರ ಪಾದಧೂಳಿಯಿಂದ ಪರಮಪವಿತ್ರವಾದ ನೆಲ, ಭೂಭಾಗದಡಿಗೊಂದರಂತೆ ಪವಿತ್ರೋದಕಗಳ ಸಂಗಮ, ನೆಲೆನೆಲೆಗಳಿರುವಲ್ಲಿ ತೆರೆದಿದೆ ಮನೆ ಬಾ ಅತಿಥಿ ಎನ್ನುವ ಆತಿಥ್ಯದ ಸೆಲೆಯುಳ್ಳವರು, ಆಲಯ ಆಲಯಗಳೂ ದೇವಾಲಯಗಳಾಗಿ, ಮನೆ ಮನಗಳೂ ದೇವರ ಕೋಣೆಗಳಾಗಿ, ಮಾನವೀಯತೆ, ಪವಿತ್ರತೆ ಶಾಂತಿಯೇ ಮೊದಲಾದ ಅಪೇಕ್ಷಿತ ಗುಣಗಳ ಪ್ರತೀಕಾಷ್ಠೆಯ ಪ್ರತಿರೂಪ ಭಾರತ. ಸಿಂಧು ತೀರದಿಂದ ತೇಲಿ ಬಂದ ಸುಗಂಧ, ಕೈಲಾಸದ ಶಿಖರಾಗ್ರದಲ್ಲಿ ಅನುರಣಿಸುವ ಶಿವಮಂತ್ರ, ಚುಶುಲ್ ನ ಪರ್ವಾತಾರೋಹಣ, ಹೆಪ್ಪುಗಟ್ಟಿದ ಝನ್ಕರ್ ನದಿಯ ಹಿಮ ಪದರಗಳ ಮೇಲೊಂದು ನಡಿಗೆ, ಉತ್ತರದ ಎತ್ತರದ ಕಾಂಚನಜುಂಗಾದಿಂದ ದಕ್ಷಿಣದ ರಾಮಸೇತುವಿನವರೆಗೆ ಸಂಸ್ಕೃತಿಯೇ ಮೈ ತಳೆದ ವಿಭಿನ್ನತೆ, ಪ್ರತೀ ಮನದ ನರನಾಡಿಗಳೆಲ್ಲಾ ಪ್ರಣವದ ಓಂಕಾರವೇ ಆಗಿ ಮೇಳೈಸಿರುವುದು ಭಾರತದ ಗರಿಮೆ.
ಈ ಎಲ್ಲಾ ಗರಿಮೆಗಳನ್ನು ಸಮತೂಕದಲ್ಲಿ ತೂಗಿ, ಇಲ್ಲಿನ ಕಣಕಣವನ್ನು ಶೋಧಿಸಿ, ಹೊರಬರುವ ಹೊಳೆವ ಮುತ್ತುಗಳು ಹಾಗೂ ಇಲ್ಲಿಯೇ ಭೂಗತವಾದ ಬೆಣಚುಗಲ್ಲುಗಳು ಮತ್ತದರ ಪಳೆಯುಳಿಕೆಗಳನ್ನು ದಾಖಲೆ ಸಮೇತವಾಗಿ ಹೊರಗೆಳೆಯುವ ಸಲುವಾಗಿ ಹುಟ್ಟಿರುವುದು ಈ ” just 5 ಕನ್ನಡ”
ಇದರ ನಾಡಿ, ನಾಡಿನ ನಾಡಿಮಿಡಿತವನ್ನು ಬಡಿದೆಚ್ಚರಿಸಿ, ಸ್ವಾರ್ಥ ಮೋಹಗಳ ಬಲೆಯಲ್ಲಿ ಸಿಲುಕಿ, ದೇಶದ ಮಾನ ಹರಾಜು ಮಾಡುವವರ ಬಣ್ಣ ಬಯಲಿಗೆಳೆದು, “ಪಕ್ಷಾತೀತವಾಗಿ” “ಜಾತ್ಯಾತೀತವಾಗಿ” “ಸರ್ವಪಂಥಸಮಭಾವ” ದೊಂದಿಗೆ ನಡೆಯುವ ದೇಶದ ನಾಡಿ ಶೋಧನೆಯೇ ಆಗಿದೆ. ಈ ನಾಡಿ ಹದಗೆಡದೇ ಸ್ವಸ್ಥ ಭಾರತದ ನವನಿರ್ಮಾಣಕ್ಕೆ ಭದ್ರಬುನಾದಿ ಒದಗಿಸುವ ಸಲುವಾಗಿ ಇಲ್ಲಿನ ಪ್ರತೀ ಸುದ್ದಿಗಳು. ಎಡಪಂಥ, ಬಲಪಂಥಗಳ ಸುಳಿಯಲ್ಲಿ ಸಿಲುಕದೇ, ಸಮಪಂಥದ ಸೂತ್ರವೇ ಈ ” just 5 ಕನ್ನಡ”
ಇದರ ದಿವ್ಯಸೂತ್ರ ಠಾಗೋರರ ಮೂಲಮಂತ್ರದಂತೆ
ಎಲ್ಲಿ ಮನಕಳುಕಿರದೊ, ಎಲ್ಲಿ ತಲೆ ಬಾಗಿರದೊ|
ಎಲ್ಲಿ ತಿಳಿವಿಗೆ ತೊಡಕು ತೋರದಿಹುದಲ್ಲಿ||
ಎಲ್ಲಿ ಮನೆಯೊಕ್ಕಟ್ಟು, ಸಂಸಾರ ನೆಲೆಗಟ್ಟು|
ಧೂಳೊಡೆಯದಿಹುದೊ ತಾನಾನಾಡಿನಲ್ಲಿ||
ಎಲ್ಲಿ ಸತ್ಯಗಂಧ ನೆಲೆಯಿಂದ ಸವಿವಾತು|
ಸಲ್ಲಲಿತ ನಡೆಯಿಂದ ಮುಂಬರಿವುದಲ್ಲಿ||
ಎಲ್ಲಿ ದಣಿವಿರದ ಸಾಧನೆಯು ಸಫಲತೆ ಕಡೆಗೆ|
ತೋಳ ನೀಡಿಹುದೊ ತಾನಾನಾಡಿನಲ್ಲಿ||
ಎಲ್ಲಿ ಸುವಿಚಾರ ನಿರ್ಮಲ ಜಲದೊಸರು ಹರಿದು|
ಕಾಲರೂಢಿಯ ಮರಳೊಳಿಂಗಿ ಕೆಡದಲ್ಲಿ||
ಎಲ್ಲಿ ನೀನೆಮ್ಮ ಚಿಂತನವನುದ್ಯಮವ ಸುವಿ|
ಶಾಲತೆಯ ಪೂರ್ಣತೆಗೆ ಮುನ್ನಡೆಸುವಲ್ಲಿ||
ಅಲ್ಲಿಯಾ ಬಂಧನ ರಹಿತ ಸುಖದ ಸ್ವರ್ಗದಲಿ|
ಪಾಲಿಸೈ ಪಿತ ನಮ್ಮ ನಾಡೆಚ್ಚರಿರಲಿ||
ಎನ್ನುವುದೇ ಆಗಿದೆ. ನಿಮ್ಮ ಧ್ವನಿ ನಮ್ಮ ಕರೆಗೆ ಸೇರುವುದಾದರೆ, ಕರ ಜೋಡಿಸಿ ಸ್ವಾಗತ ಕೋರುತ್ತೇವೆ.
ಇದು ” just 5 ಕನ್ನಡ”
just5kannada@gmail.com